ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಬೆಸ್ಕಾಂ ಕಚೇರಿ ಮತ್ತು ತಾಲೂಕು ಕಚೇರಿ ಎದುರು ವಿದ್ಯುತ್ ಖಾಸಗೀಕರಣಗೊಳಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಣಯದ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳ ಎಸ್ಕಾಂಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ಇವೆಲ್ಲವೂ ಲಾಭದಾಯಕವಾದ ಪ್ರದೇಶವಾಗಿವೆ. ಹಾಗಾಗಿ ಟಾಟಾ ಪವರ್ ಕಂಪನಿ ಈ ಪ್ರದೇಶಗಳಲ್ಲಿ ಲಾಭ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದರು.
ಕಳೆದ ಏಳೆಂಟು ದಶಕಗಳಿಂದ ಕೆಇಬಿ ರಾಜ್ಯದ ಜನರಿಗೆ ಇದ್ದುದರಲ್ಲಿ ಉತ್ತಮ ಸೇವೆ ನೀಡುತ್ತಿದೆ. ಈಗ ಖಾಸಗೀಕರಣಗೊಳಿಸಿದರೆ ಜನರ ಜೀವನ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಲಾಭಾಂಶ ಬರುವ ಕೈಗಾರಿಕೆಗಳು ಮತ್ತು ವಾಣಿಜ್ಯ ವಲಯಕ್ಕೆ ಮಾತ್ರ ಅದು ಒತ್ತು ನೀಡಲಿದೆ. ಈಗ ಸರ್ಕಾರ ಜಾರಿಗೆ ತಂದಿರುವ ಕೃಷಿಗೆ ಉಚಿತ ವಿದ್ಯುತ್, ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಇನ್ನಿತರ ಜನಸಾಮಾನ್ಯರು ಉಪಯೋಗಿಸುತ್ತಿರುವ ಯೋಜನೆಗಳು ಬಂದ್ ಆಗಲಿವೆ. ಅಲ್ಲದೇ ಸದ್ಯ ಕೆಇಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಕುಟುಂಬದ ಸದಸ್ಯರಿಗೂ ಗೇಟ್ ಪಾಸ್ ನೀಡಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಹಲವಾರು ದಶಕಗಳಿಂದ ಕೆಇಬಿ ಲಕ್ಷಾಂತರ ಕೋಟಿ ಹಣ ವಿನಿಯೋಗಿಸಿ ವಿತರಣಾ ಜಾಲ, ಉಪಕೇಂದ್ರಗಳು, ಯಂತ್ರೋಪಕರಣಗಳು ಸೇರಿ ಕೋಟ್ಯಾಂತರ ರು. ಬೆಲೆ ಬಾಳುವ ಭೂಮಿಯನ್ನೂ ಸಹ ಹೊಂದಿದೆ. ಹಲವಾರು ದಾನಿಗಳು ವಿದ್ಯುತ್ ಕೇಂದ್ರಕ್ಕಾಗಿ ನಿಸ್ವಾರ್ಥದಿಂದ ಜಮೀನು ನೀಡಿದ್ದಾರೆ. ಈಗ ಅದೆಲ್ಲವೂ ಕಂಡವರ ಪಾಲಾಗುತ್ತದೆ ಎಂದು ಕಣಕೂರು ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅನಿಲ್ ಕುಮಾರ್, ಆಟೋ ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಸುಧಾ, ಯುವ ಘಟಕದ ಅಧ್ಯಕ್ಷ ಹರ್ಷಿತ್, ವಿನೋದ್, ರಾಕೇಶ್, ಧನಂಜಯ್, ಶಿವಸ್ವಾಮಿ, ರಮೇಶ್, ರವಿಪ್ರಕಾಶ್, ಕೆ.ಬಿ.ರಾಮು, ಸತೀಶ್, ಸದಾನಂದ್, ಸುರೇಶ್, ಬಸವರಾಜು, ಶಿವಾನಂದಸ್ವಾಮಿ, ಆಟೋ ಜಗದೀಶ್, ದೇವರಾಜು ಸೇರಿದಂತೆ ಹಲವರು ಇದ್ದರು.