ಚಳ್ಳಕೆರೆ ತಾಲೂಕು ತಳಕು ಕೆಪಿಟಿಸಿಎಲ್ ಕಚೇರಿ ಎದುರು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ಎಂಜಿನಿಯರ್ ಮಮತಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದು ರೈತರ ಬದುಕಿನ ಮೇಲೆ ಬರೆ ಎಳೆದಂತೆ. ತಕ್ಷಣವೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದರೆ ರೈತ ಸಂಘಟನೆಗಳು ಎಲ್ಲಾ ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ವಿದ್ಯುತ್ ಎಲ್ಲಾ ಕಚೇರಿಗಳನ್ನು ವಶಕ್ಕೆ ಪಡೆದು ರೈತರೇ ಆಡಳಿತ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು ತಳಕು ಕೆಪಿಟಿಸಿಎಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಂತಹ ನಿರ್ಧಾರದಿಂದಾಗಿ ರೈತರ ಪಂಪ್ ಸೆಟ್‌ಗಳು, ಮನೆಯ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲೂ ಪರದಾಡಬೇಕಾಗುತ್ತದೆ. ರೈತರೇ ಈ ದೇಶದ ಬೆನ್ನೆಲುಬು. ಇಂತಹ ಅನ್ನದಾತನ ಬೆನ್ನೆಲುಬು ಮುರಿಯುವ ಕೆಲಸವನ್ನು ಸರ್ಕಾರ ಮಾಡಬಾರದು.
ಖಾಸಗಿಯವರ ಕೈಗೆ ವಿದ್ಯುತ್ ಇಲಾಖೆ ಹೋದರೆ ರೈತರಿಗೆ ಉಳಿಗಾಲವಿಲ್ಲ. ಆದ್ದರಿಂದ ರಾಜ್ಯದ 224 ಕ್ಷೇತ್ರಗಳ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಎಲ್ಲರೂ ಸೇರಿ ಸರ್ಕಾರದ ಮಟ್ಟದಲ್ಲಿ ಈ ನಿರ್ಧಾರವನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ, ಲಿಂಕ್ ಲೈನ್, ಸರಬರಾಜು, ಸ್ಟೇಷನ್, ಸಬ್ ಸ್ಟೇಷನ್ ಸೇರಿದಂತೆ ಅನೇಕ ಗುರುತರ ಕೆಲಸಗಳನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಕರ್ನಾಟಕ ಹೆಸರು ಮಾಡಿದೆ. ಇದರಿಂದಾಗಿ ಸಾಕಷ್ಟು ಆದಾಯವೂ ಹೆಚ್ಚಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಟಾಟಾ ಕಂಪನಿಗೆ ಕೊಡುವ ಮೂಲಕ ಕಿಕ್ ಬ್ಯಾಕ್ ಪಡೆಯುವ ಉದ್ದೇಶವೇನಾದರೂ ಇದೆಯಾ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ತಳಕು ಕೆಪಿಟಿಸಿಎಲ್ ಎಂಜಿನಿಯರ್ ಮಮತಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಪಿ. ಭೂತಯ್ಯ, ಮರ್ಲಹಳ್ಳಿ ರವಿಕುಮಾರ್, ಡಿಎಸ್. ಹಳ್ಳಿ ಮಲ್ಲಿಕಾರ್ಜುನ, ನೇರ್ಲಹಳ್ಳಿ ಮಹೇಶ್ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.