ವಿದ್ಯುತ್‌ ಕಾಮಗಾರಿ ಎಸ್ಆರ್‌ ದರ ಇಳಿಕೆ : ಮುಷ್ಕರದ ಎಚ್ಚರಿಕೆ

KannadaprabhaNewsNetwork | Published : Jul 28, 2024 2:00 AM

ಸಾರಾಂಶ

ಚಿಕ್ಕಮಗಳೂರು, ಮೆಸ್ಕಾಂನಿಂದ ತುರ್ತು ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸಲು ಶೇ.45 ರಷ್ಟು ನಿಗದಿಪಡಿಸಿದ್ದ ಎಸ್‌ಆರ್ ದರವನ್ನು ಶೇ.12ಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ತುರ್ತು ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಆರ್‌. ಹರೀಶ್ ಹೇಳಿದ್ದಾರೆ.

ಶೇ.45 ರಷ್ಟು ನಿಗದಿಪಡಿಸಿದ್ದ ಎಸ್‌ಆರ್ ದರವನ್ನು ಶೇ.12ಕ್ಕೆ ಇಳಿಸಿರುವ ಸರ್ಕಾರ: ಹರೀಶ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮೆಸ್ಕಾಂನಿಂದ ತುರ್ತು ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸಲು ಶೇ.45 ರಷ್ಟು ನಿಗದಿಪಡಿಸಿದ್ದ ಎಸ್‌ಆರ್ ದರವನ್ನು ಶೇ.12ಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ತುರ್ತು ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಆರ್‌. ಹರೀಶ್ ಹೇಳಿದ್ದಾರೆ

ಜಿಲ್ಲೆಯಾದ್ಯಂತ ಗಾಳಿ, ಮಳೆ ಬರುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಹಾನಿಯಾಗಿ ಮುರಿದು ಬಿದ್ದಾಗ ಇದರ ದುರಸ್ತಿಗೆ ಎಸ್‌ಆರ್ ದರದಂತೆ ಪ್ರತೀ ಕಂಬಕ್ಕೆ 6 ಸಾವಿರ ರು. ಗಳನ್ನು ನೀಡುತ್ತಿದ್ದು, ಅದನ್ನು ಈಗ 3 ಸಾವಿರ ರು.ಗಳಿಗೆ ಇಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಬ್ರೇಕ್‌ ಡೌನ್ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸ ಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆ ನೀಗಿಸುವಂತೆ ಕಳೆದ ಮಾರ್ಚ್‌ 25 ರಂದು ಸಚಿವರಿಗೆ ಮನವಿ ಮಾಡಿ, 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಬ್ರೇಕ್‌ಡೌನ್ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಮಲೆನಾಡು ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು ವಿದ್ಯುತ್ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನೀಡಲು ನೆರವಾಗುತ್ತಿದ್ದಾರೆ. ಈ ಸೌಲಭ್ಯವನ್ನು ವಾಪಸ್ ಪಡೆದಿರುವುದರಿಂದ ಗುತ್ತಿಗೆದಾರರಿಗೆ ತುಂಬಾ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಗುತ್ತಿಗೆದಾರರು ಸ್ವಂತ ನಿರ್ವಹಣೆಯಲ್ಲಿ ಐಪಿ ಸೆಟ್ ಕಾಮಗಾರಿಗಳಿಗೆ 4 ಸ್ಟಾರ್ ಪರಿವರ್ತಕ ಗಳನ್ನು ಅಳವಡಿಸಲು ನಿರ್ದೇಶನವಿದ್ದರೂ ಅಧಿಕಾರಿಗಳು 5 ಸ್ಟಾರ್ ಪರಿವರ್ತಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸುತ್ತಾರೆ. ಆದ್ದರಿಂದ ತಾವು ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.

ಹಿಂದಿನ ಎಸ್‌ಆರ್ ದರದಂತೆ ಪ್ರತಿ ಕಂಬ ದುರಸ್ಥಿಗೆ 6 ಸಾವಿರ ರು.ಗಳನ್ನು ನೀಡುವುದಾಗಿ ಅದೇಶಿಸುವವರೆಗೆ ಬ್ರೇಕ್‌ಡೌನ್ ಕಾಮಗಾರಿಗಳನ್ನು ನಡೆಸುವುದಿಲ್ಲವೆಂದು ಸಂಘ ತೀರ್ಮಾನಿಸಿರುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಂ.ರಮೇಶ್, ಜಿಲ್ಲಾ ಗೌರವ ಸಂಘಟನಾ ಕಾರ್ಯದರ್ಶಿ ಕಾಂತಕುಮಾರ್ ಕೆ.ಎಸ್, ಶಶಿ, ಕಾಂತರಾಜ್, ಸಮೀರ್ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 27 ಕೆಸಿಕೆಎಂ 4

Share this article