4 ರಾಜ್ಯಗಳ ಗಡಿಯಲ್ಲಿ ಆನೆ ಗಣತಿ ಆರಂಭ

KannadaprabhaNewsNetwork |  
Published : May 24, 2024, 12:59 AM ISTUpdated : May 24, 2024, 09:12 AM IST
ಆನೆ ಗಣತಿ  | Kannada Prabha

ಸಾರಾಂಶ

ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಆನೆಗಳ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ತಿಳಿಯುವ ಸಲುವಾಗಿ   ಸಮಿತಿ (ಐಸಿಸಿ)ಯ ಉಸ್ತುವಾರಿಯಲ್ಲಿ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಗುರುವಾರದಿಂದ ಆನೆ ಗಣತಿ ಆರಂಭಿಸಲಾಗಿದೆ.

 ಬೆಂಗಳೂರು :  ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಆನೆಗಳ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ತಿಳಿಯುವ ಸಲುವಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅಂತರರಾಜ್ಯ ಸಮನ್ವಯ ಸಮಿತಿ (ಐಸಿಸಿ)ಯ ಉಸ್ತುವಾರಿಯಲ್ಲಿ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಗುರುವಾರದಿಂದ ಆನೆ ಗಣತಿ ಆರಂಭಿಸಲಾಗಿದೆ.

ಇತ್ತೀಚೆಗೆ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷ ಪ್ರಕರಣಗಳನ್ನು ತಡೆಯಲು, ಸಂಘರ್ಷ ನಿರ್ವಹಣಾ ತಂತ್ರಗಳನ್ನು ವಿನ್ಯಾಸಗೊಳಿಸಲು ಅಂತರರಾಜ್ಯ ಸಮನ್ವಯ ಸಮಿತಿ ಕ್ರಮ ಕೈಗೊಳ್ಳುತ್ತಿದೆ. ಅದರ ಭಾಗವಾಗಿ ನೀಲಗಿರಿ ಪರ್ವತ ಶ್ರೇಣಿ ವ್ಯಾಪ್ತಿಯ 10 ಅರಣ್ಯ ವಿಭಾಗಗಳ ಅರಣ್ಯ ಪ್ರದೇಶದಲ್ಲಿ ಆನೆಗಳ ಗಣತಿ ಕಾರ್ಯ ನಡೆಸಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯಲಿರುವ ಗಣತಿ ಕಾರ್ಯವನ್ನು ಮೂರು ವಿಭಾಗದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ 1,689 ಸಿಬ್ಬಂದಿ, ಅಧಿಕಾರಿ ಮತ್ತು ತಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ.

ಆನೆ ಗಣತಿಯ ಮೊದಲ ದಿನವಾದ ಗುರುವಾರ, ಬ್ಲಾಕ್‌ ಸ್ಯಾಂಪ್ಲಿಂಗ್‌ ಅಥವಾ ಡೈರೆಕ್ಟ್‌ ಕೌಂಟ್‌ ವಿಧಾನವನ್ನು ಅನುಸರಿಸಲಾಗಿದೆ. ಅದರಂತೆ 2023ರಲ್ಲಿ ನಡೆಸಲಾದ ಆನೆ ಗಣತಿಯಲ್ಲಿರುವ ಮಾಹಿತಿಯಂತೆ ಆನೆಗಳ ಇರುವಿಕೆಯನ್ನು ಮತ್ತೊಮ್ಮೆ ಬೀಟ್‌ಗಳ ಮೂಲಕ ಲೆಕ್ಕ ಹಾಕಲಾಗಿದೆ. ಅದರ ಜತೆಗೆ ಆನೆಗಳು ಇರುವಲ್ಲಿನ ಸಸ್ಯ ವರ್ಗ, ಎತ್ತರದ ಶ್ರೇಣಿ ಮತ್ತು ಮಳೆ ಮಾದರಿಯ ವಿವರವನ್ನು ಪಡೆಯಲಾಗಿದೆ. ಈ ವೇಳೆ ಆನೆಗಳ ಜತೆಗೆ ಕಾಣಿಸಿದ ಪ್ರಾಣಿಗಳು, ಅವುಗಳ ವಯಸ್ಸು ಮತ್ತು ಲಿಂಗವನ್ನು ದಾಖಲಿಸಲಾಗಿದೆ.

ಗಣತಿಯ ಎರಡನೇ ದಿನವಾದ ಶುಕ್ರವಾರ ಲೈನ್‌ ಟ್ರಾನ್ಸೆಕ್ಟ್ಸ್‌ ಕಾರ್ಯ ಮಾಡಲಾಗುತ್ತದೆ. ಮೊದಲ ದಿನ ಬೀಟ್‌ ಮಾಡುವ ವೇಳೆ 2 ಕಿ.ಮೀ. ಉದ್ದದ ಲೈನ್‌ ಟ್ರಾನ್ಸೆಕ್ಟ್ಸ್‌ ನಿಗದಿ ಮಾಡಲಾಗಿದ್ದು, ಆ ಲೈನ್‌ ಟ್ರಾನ್ಸೆಕ್ಟ್ಸ್‌ನಲ್ಲಿ ನಡಿಗೆ ಮೂಲಕ ಎರಡು ಬದಿಗಳಲ್ಲಿನ ಆನೆ ಲದ್ದಿಗಳ ರಾಶಿಯ ಬಗ್ಗೆ ದತ್ತಾಂಶ ದಾಖಲಿಸಲಾಗುತ್ತದೆ. ಲೈನ್‌ ಟ್ರಾನ್ಸೆಕ್ಟ್ಸ್‌ನಿಂದ ಆನೆ ಲದ್ದಿಯ ದೂರ ಮತ್ತು ಲದ್ದಿ ಹಾಕಿರಬಹುದಾದ ಅವಧಿಯನ್ನು ಅಂದಾಜಿಸಿ ದಾಖಲಿಸಲಾಗುತ್ತದೆ.

ಮೊದಲ ಎರಡು ಕಾರ್ಯವಿಧಾನದಿಂದ ಆನೆಗಳ ಅಂದಾಜು ಆವಾಸ ಸ್ಥಾನ ತಿಳಿಯಲಿದೆ. ಅದರ ಜತೆಗೆ ಅರಣ್ಯ ಪ್ರದೇಶ, ಭೂ ಬಳಕೆಯ ಪ್ರಕಾರ, ಸರಾಸರಿ ಆನೆ ಸಾಂದ್ರತೆಗಳನ್ನು ದಾಖಲಿಸಲಾಗುತ್ತದೆ.

ಮೂರನೇ ದಿನ ಛಾಯಾಚಿತ್ರ ಪುರಾವೆಗಳೊಂದಿಗೆ ಆನೆಗಳು ಬಳಸುವ ನೀರಿನ ಮೂಲಗಳನ್ನು ಗುರುತಿಸಲಾಗುತ್ತದೆ. ಆನೆಗಳು ಗರಿಷ್ಠ ಬಳಸುವ ನೀರಿನ ಹೊಂಡಗಳು, ತೆರೆದ ಪ್ರದೇಶಗಳನ್ನು ಗುರುತಿಸಿ, ಬೆಳಗ್ಗೆ 6ರಿಂದ ಸಂಜೆ 6ರವೆಗೆ ಆನೆಗಳ ನಿಗದಿತ ತಾಣ ವೀಕ್ಷಣೆ ಮಾಡಲಾಗುತ್ತದೆ. ಆನೆಗಳು ಕಾಣಿಸಿಕೊಂಡರೆ ಹಿಂಡಿನ ಗಾತ್ರೆ, ಆನೆಗಳ ವಯಸ್ಸು, ಲಿಂಗ ಸೇರಿದಂತೆ ಆನೆಗಳ ಛಾಯಾಚಿತ್ರ ದಾಖಲಿಸಲಾಗುತ್ತದೆ.

ಆನೆ ಗಣತಿಯಲ್ಲಿ ಸಂಗ್ರಹಿಸಲಾದ ದತ್ತಾಂಶವನ್ನು ಬೆಂಗಳೂರಿನ ಐಐಎಸ್ಸಿ ವಿಜ್ಞಾನಿಗಳ ಸಹಾಯದೊಂದಿಗೆ, ಸಂಖ್ಯಾಶಾಸ್ತ್ರೀಯ ವಿಧಾನ ಬಳಸಿಕೊಂಡು ವಿಶ್ಲೇಷಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ