ಆನೆ-ಮಾನವ ಸಂಘರ್ಷ: ವಿಧಾನಸೌಧ ಮುತ್ತಿಗೆ ನಿರ್ಧಾರ

KannadaprabhaNewsNetwork |  
Published : Jun 11, 2026, 01:15 AM IST
ಎಚ್ಚರಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಮಿತಿಮೀರಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕೊಡಗು ಬಂದ್, ಬೆಂಗಳೂರು ಚಲೋ, ವಿಧಾನಸೌಧಕ್ಕೆ ಮುತ್ತಿಗೆ ಹೋರಾಟವನ್ನು ಹಂತಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಮಿತಿಮೀರಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕೊಡಗು ಬಂದ್, ಬೆಂಗಳೂರು ಚಲೋ, ವಿಧಾನಸೌಧಕ್ಕೆ ಮುತ್ತಿಗೆ ಹೋರಾಟವನ್ನು ಹಂತಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಎಚ್ಚರಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಿಂಗಳಿಗೆ ಇಬ್ಬರಂತೆ ಬೆಳೆಗಾರರು, ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಸಾಕಷ್ಟು ಸಾವು ನೋವು ಸಂಭವಿಸಿದರು ರಾಜ್ಯ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರವನ್ನು ಎಚ್ಚರಿಸಲು ಈ ಹಿಂದೆ ಮಡಿಕೇರಿ, ವಿರಾಜಪೇಟೆ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು ಸಮಸ್ಯೆ ಬಗ್ಗೆ ಗಂಭೀರ ಚಿಂತನೆ ಹರಿಸಿಲ್ಲ. ಆದ್ದರಿಂದ ಜೂ.13ರಂದು ಶನಿವಾರಸಂತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆಗಮಿಸಲಿದ್ದು, ಈ ಸಂದರ್ಭ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಿತಿಮೀರಲು ಕಾರಣ: ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಹೊಸದಲ್ಲ. ಆದರೆ, ರಾಜ್ಯ ಸರ್ಕಾರ ತಡೆಯುವಲ್ಲಿ ವಿಫಲವಾಗಿದೆ ಎಂದ ಅವರು, 2010ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಆಡಳಿದಲ್ಲಿದ್ದ ಸಂದರ್ಭದಲ್ಲಿ ಕಾಡಾನೆ ಹಾವಳಿ ತಡೆಗೆ ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ಯೋಜನೆ ಅನುಷ್ಠಾನಕ್ಕೆ ತಂದಿತ್ತು. ಆ ನಂತರ ಬಿಜೆಪಿ ಸರ್ಕಾರ ಇದರ ನಿರ್ವಹಣೆಯನ್ನು ಮಾಡಿಕೊಂಡು ಬಂದಿತ್ತು. ಪರಿಣಾಮ ಆನೆ ಸಂಘರ್ಷ ಕಡಿಮೆಗೊಂಡಿತ್ತು. ಆದರೆ, ಇತ್ತೀಚಿನ ರಾಜ್ಯ ಸರ್ಕಾರ ರೈಲ್ವೆ ಬ್ಯಾರಿಕೇಡ್ ಮತ್ತು ಆನೆ ಕಂದಕದ ನಿರ್ವಾಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಪರಿಣಾಮವೇ ಕಾಡಾನೆಗಳ ದಾಳಿ ಮಿತಿಮೀರಲು ಕಾರಣ ಎಂದು ಟೀಕಿಸಿದರು.ಕೊಡಗಿನಲ್ಲಿ ನಿರಂತವಾಗಿ ಕಾಡಾನೆ ದಾಳಿಯಾಗುತ್ತಿದೆ. ಇತ್ತೀಚೆಗೆ ದಕ್ಷ ಹಿರಿಯ ಅಧಿಕಾರಿಯ ಪತ್ನಿ ಅಸುನೀಗಿದ್ದಾರೆ. ಮಾನವನ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಜಿಲ್ಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದರು.ಪ್ರಾಣಿಗಳ ಮೇಲೆ ದಯೆ ಇರಲಿ ಎಂದು ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಲ್ಲಿ ಹಾಕಿಸಿದ್ದಾರೆ. ಆದರೆ, ಜಿಲ್ಲೆಯ ರೈತಾಪಿ ವರ್ಗ, ಕಾರ್ಮಿಕ ವರ್ಗ ಕಾಡಾನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಮನುಷ್ಯನ ಮೇಲೆ ರಾಜ್ಯ ಸರ್ಕಾರಕ್ಕೆ ದಯೇ ಇಲ್ಲವೇ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವನ್ಯಜೀವಿಗಳ ನಿಯಂತ್ರಣಕ್ಕೆ ಎಂದು 5 ವರ್ಷಕ್ಕೆ 1500 ಕೋಟಿ ಅನುದಾನ ಘೋಷಿಸಿದ್ದಾರೆ. ಈ ಹಣ ಎಲ್ಲಿ ಹೋಗಿದೆ. ಎಷ್ಟು ಕಾಮಗಾರಿ ನಡೆದಿದೆ ಎಂಬ ಮಾಹಿತಿಯನ್ನು ನೀಡುವಂತಾಗಬೇಕು ಎಂದ ಅವರು, ರಾಜ್ಯ ಸರ್ಕಾರ ಇಂದು ಗ್ಯಾರೆಂಟಿಗೆ ಹಣ ನೀಡಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಟೀಕಿಸಿದರು.ವನ್ಯಜೀವಿಗಳ ದಾಳಿ ತಡೆಯ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದ ಅವರು, ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸದೆ ಕೇಂದ್ರದಿಂದ ಅಗತ್ಯ ಅನುದಾನ ಬಿಡುಗಡೆಯಾಗಲು ಸಾಧ್ಯವಿಲ್ಲ. ಕೇರಳ ಸರ್ಕಾರ ಪ್ರಸ್ತಾವನೆ ಸಲ್ಲಿಸಿ ಕೇಂದ್ರದಿಂದ ಅನುದಾನ ತಂದಿದೆ. ಆದರೆ, ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸುವ ಗೋಜಿಗೇ ಹೋಗದೆ ವಿನಾಕಾರಣ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಇನ್ನೂ ನಮ್ಮ ನೆತ್ತಿಯ ಮೇಲಿದೆ. ಆದರೆ, ಕೇರಳ ರಾಜ್ಯ ಕಸ್ತೂರಿ ರಂಗನ್ ವರದಿಯಿಂದ ಹೊರ ಬಂದಿದೆ. ನಮ್ಮ ರಾಜ್ಯದವರಿಗೆ ಇದು ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೇರಳ ರಾಜ್ಯದಲ್ಲಿ ಬದ್ಧತೆಯಿದೆ. ಆದರೆ ನಮ್ಮ ರಾಜ್ಯದಲ್ಲಿ ಬದ್ಧತೆಯಿಲ್ಲ. ಪರಿಣಾಮ ಕಸ್ತೂರಿ ರಂಗನ್ ವರದಿ ಇನ್ನು ನಮ್ಮ ನೆತ್ತಿಯ ಮೇಲಿದೆ ಎಂದು ಟೀಕಿಸಿದರು.

ಹಿಂದೇಟು ಹಾಕುವ ಪರಿಸ್ಥಿತಿ: ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ ಮಾತನಾಡಿ, ಕೊಡಗು ಜಲ್ಲೆ ಸೇರಿದಂತೆ ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಪರಿಣಾಮ ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆನೆ ಮಾನವ ಸಂಘರ್ಷ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ 5 ಜಿಲ್ಲೆಗಳಲ್ಲಿ ಸಂಘಟನೆ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್, ಸದಸ್ಯ ರಾಬೀನ್ ದೇವಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ನದಿಗೆ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು
ಗೋಣಿಕೊಪ್ಪ: ಬಿಜೆಪಿ ವಿರಾಜಪೇಟೆ ಮಂಡಲ ಕಚೇರಿ ಲೋಕಾರ್ಪಣೆ