ಆನೆ ದಂತ ಅಪಹರಣ: ಗಾರ್ಡ್‌, ಎಆರ್‌ಎಫ್‌ಓ ಅಮಾನತು

KannadaprabhaNewsNetwork |  
Published : Jan 07, 2025, 12:15 AM IST

ಸಾರಾಂಶ

ಚಿಕ್ಕಮಗಳೂರು, ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶ ಬೈರಾಪುರ ಸರ್ವೇ ನಂಬರ್ 37ರಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಮಾಡಿದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಅಲ್ಲಿನ ಸಿಬ್ಬಂದಿ ಭಾಗಿ ಆಗಿರುವ ಬಗ್ಗೆ ತನಿಖೆಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ಫಾರೆಸ್ಟ್ ಗಾರ್ಡ್ ದೇವರಾಜ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕುಮಾರ್ ನಾಯಕ್ ಅವರನ್ನು ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಕುಮಾರ್ ನಾಯಕ್ ಅಮಾನತು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶ ಬೈರಾಪುರ ಸರ್ವೇ ನಂಬರ್ 37ರಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಮಾಡಿದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಅಲ್ಲಿನ ಸಿಬ್ಬಂದಿ ಭಾಗಿ ಆಗಿರುವ ಬಗ್ಗೆ ತನಿಖೆಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ಫಾರೆಸ್ಟ್ ಗಾರ್ಡ್ ದೇವರಾಜ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕುಮಾರ್ ನಾಯಕ್ ಅವರನ್ನು ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

ಆದೇಶದಲ್ಲಿ ಉಲ್ಲೇಖಿಸಿದ ಅಂಶ ನೋಡಿದರೆ ಆನೆ ಹತ್ಯೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಜೂನ್ 2024ರಲ್ಲೇ ಆನೆ ಕಳೇಬರ ಅಲ್ಲಿನ ಬೀಟ್ ಸಿಬ್ಬಂದಿಗೆ ಸಿಕ್ಕಿದೆ. ಆಗ ಅದರಲ್ಲಿ ದಂತ ಇರುವುದು ಕಂಡುಬಂದಿದೆ. ಇದನ್ನು ಮೇಲಾಧಿಕಾರಿಗಳಿಗೆ ತಿಳಿಸದೆ ದಂತ ಕಳವು ಮಾಡಿರುವ ಸಾಧ್ಯತೆ ಇರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಆನೆ ಕಳೇಬರದ ಮರಣೋತ್ತರ ಪರೀಕ್ಷೆ ಕಾಟಾಚಾರಕ್ಕೆ ಮಾಡಿಸಿ ಹೆಣ್ಣು ಆನೆ ಎಂದು ಮುಚ್ಚಿಹಾಕುವ ವ್ಯವಸ್ಥಿತ ಹುನ್ನಾರ ಮಾಡಿದ ಆರೋಪವಿದೆ.

ಇದರಲ್ಲಿ ಸರ್ಕಾರೇತರ ಸಂಸ್ಥೆ ಸದಸ್ಯರೊಬ್ಬರು ಭಾಗಿ ಆಗಿ ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎನ್ನಲಾಗಿದ್ದು ಸರ್ಕಾರಿ ಪಶು ವೈದ್ಯರು ಬಾರದೆ ಇಲಾಖೆ ಗುತ್ತಿಗೆ ವೈದ್ಯರೇ ಮರಣೋತ್ತರ ಪರೀಕ್ಷೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಮಾಧ್ಯಮ ವರದಿ, ಸಾಮಾಜಿಕ ಪರಿಸರ ಕಾರ್ಯಕರ್ತರು ದೂರು ನೀಡಿದ ಮೇಲೆ ಅರಣ್ಯ ಸಚಿವರು ತನಿಖೆ ಮಾಡುವಂತೆ ಆದೇಶ ಮಾಡಿದ್ದರು.

ಇಲಾಖೆ ಹಿರಿಯ ಅಧಿಕಾರಿಗಳು ತನಿಖೆ ಮಾಡಿ, ಆನೆ ದಂತ ನಾಪತ್ತೆ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಧೀನ ಸಿಬ್ಬಂದಿಯನ್ನು ಅಮಾನತು ಮಾಡಿ ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಯತ್ನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹಿರಿಯ ಅಧಿಕಾರಿಗಳ ತಲೆ ದಂಡ ಆಗಬೇಕು. ಆರೋಪಿಗಳು ಪತ್ತೆ ಹಚ್ಚಿ, ಆನೆ ದಂತಗಳನ್ನು ತಕ್ಷಣ ಪತ್ತೆ ಮಾಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ. ಭದ್ರಾ ಅಭಯಾರಣ್ಯದ ಮತ್ತೊಡಿ ವಲಯದಲ್ಲಿ 2004ರಲ್ಲಿ ಇದೆ ರೀತಿ ಗುಂಡು ಹೊಡೆದು ಆನೆ ಹತ್ಯೆ ಮಾಡಿ ದಂತ ಅಪಹರಣ ಮಾಡಲಾಗಿತ್ತು. ಕಳ್ಳರನ್ನು ಹಿಡಿದು ದಂತ ವಶಪಡಿಸಿಕೊಳ್ಳಲಾಗಿತ್ತು. ಸಿಐಡಿ ತನಿಖೆಗೆ ಒತ್ತಾಯ

ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ದೂರುದಾರ ಸಾಮಾಜಿಕ ಪರಿಸರ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಒತ್ತಾಯ ಮಾಡಿದ್ದು, ಅಧಿಕಾರಿಗಳು ತನಿಖೆ ಮಾಡಿ ಎಷ್ಟೇ ಪ್ರಭಾವಿಗಳು ಇದರಲ್ಲಿ ಇದ್ದರೂ ರಕ್ಷಿಸದೆ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!