ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕೊಳಕೇರಿ ಗ್ರಾಮದ ಕೋಟೇರಿಯ ಬೊಮ್ಮಂಜಿಕೇರಿ ಹಾಗೂ ಕುಂಜಿಲ ಗ್ರಾಮದ ತೋಟಗಳಲ್ಲಿ ಬುಧವಾರ ರಾತ್ರಿ ಕಾಡಾನೆಗಳು ದಾಂದಲೆ ನಡೆಸಿ ಕೃಷಿ ಗಿಡಗಳನ್ನು ಧ್ವಂಸ ಮಾಡಿ ಅಪಾರ ನಷ್ಟ ಉಂಟು ಮಾಡಿರುವ ಘಟನೆ ಜರುಗಿದೆ.ಬೊಮ್ಮಂಜಿಕೇರಿಯ ಸುತ್ತ ಮುತ್ತಲಿನ ರೈತರ ತೋಟಗಳಿಗೆ ಕಾಡಾನೆಗಳ ಹಿಂಡು ದಾಂದಲೆ ನಡೆಸಿದ್ದು ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿದ್ದು ರೈತರು ಅಪಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಮರಿಯಾನೆ ಸೇರಿದಂತೆ ಒಂಬತ್ತು ಕಾಡಾನೆಗಳು ಸುತ್ತಮುತ್ತಲು ಅಡ್ಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಮದ ಅಚ್ಚಾಂಡಿರ, ಪುಲ್ಲೇರ, ಬಿದ್ದಾಟಂಡ, ಅಪ್ಪಾರಂಡ, ಅಚ್ಚಪಂಡ, ಮಲೆಯರ ಕುಟುಂಬಸ್ಥರ ತೋಟಗಳಲ್ಲಿ ಕಾಡಾನೆಗಳು ಕಳೆದ ಎರಡು ದಿನಗಳಿಂದ ಬೀಡು ಬಿಟ್ಟು ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ಧ್ವಂಸಮಾಡಿವೆ. ಇದು ಅಲ್ಲದೆ ಕುಂಜಿಲ ಗ್ರಾಮದ ಸುಬ್ರಾಯ ಹೆಬ್ಬಾರ್, ಬೊಳ್ಳನಮಂಡ ಪೊನ್ನಪ್ಪ ಅವರ ತೋಟದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದೆ.ಕಾಡಾನೆಗಳು ದಾಂದಲೆಯಿಂದ ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಕೆ ಗಿಡಗಳು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಪುಲ್ಲೇರ, ವಿನು, ಸೋಮಯ್ಯ, ಅಪ್ಪಾರಂಡ ಸರಿನಾ, ಅಚ್ಛಾಂಡಿರ ಅಪ್ಪಸ್ವಾಮಿ, ಗಣೇಶ, ರಾಜಮಣಿ, ಪ್ರಜ್ವಲ್, ಅಚ್ಛಾಂಡಿರ ಮಧು ಮಂದಣ್ಣ , ತಂಬಂಡ ಮುತ್ತಪ್ಪ, ರವಿ, ಮಲೆಯರ ಪೊನ್ನಪ್ಪ, ಅಪ್ಪಚ್ಚು , ತಂಬಂಡ ಶ್ಯಾಮ್ , ಅಶೋಕ್ ಸೇರಿದಂತೆ ಇನ್ನಿತರರು ಡಿಆರ್ ಎಫ್ ಒ ಗಳಾದ ಫಿರೋಜ್ ಖಾನ್, ದಿಲೀಪ್, ಕಾಳೇಗೌಡ , ಬೀಟ್ ಫಾರೆಸ್ಟ್ ಶರತ್ ಸೇರಿದಂತೆ ಸುಮಾರು 15 ಸಿಬ್ಬಂದಿ ಭಾಗವಹಿಸಿದ್ದರು.