ದಾಂಡೇಲಿಯಲ್ಲಿ ಉತ್ತರ ಕನ್ನಡ ಜಿಲ್ಲಾ 25ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ದ್ವೇಷೋತ್ಪಾದನೆ, ಭಯೋತ್ಪಾದನೆ ಹಾಗೂ ಯುದ್ಧೋತ್ಪಾದನೆ ಹೋಗಲಾಡಿಸಿ ಸಾಮರಸ್ಯದೆಡೆ ನಮ್ಮ ಪಯಣ ಇರಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.ನಗರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಇಂದು ಸಂವಾದದ ಜಾಗವನ್ನು ಉನ್ಮಾದ ಆವರಿಸಿದೆ. ವಿವೇಕದ ಜಾಗವನ್ನು ಉದ್ರೇಕ ಆವರಿಸಿದೆ. ಮಾನವೀಯತೆ ಜಾಗವನ್ನು ಮತೀಯತೆ ಆವರಿಸಿದೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಪರವಾಗಿ, ವಿವೇಕ ಪರವಾಗಿ ಮಾತನಾಡುತ್ತ, ಭಿನ್ನಾಭಿಪ್ರಾಯ ನಡುವೆ ಏಕತೆಯಿಂದ ಬದುಕುವುದೇ ಪ್ರಜಾಪ್ರಭುತ್ವ. ದ್ವೇಷೋತ್ಪಾದನೆ, ಭಯೋತ್ಪಾದನೆ ಯುದ್ಧೋತ್ಪಾದನೆ ಹೆಚ್ಚಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ದ್ವೇಷೋತ್ಪಾದನೆ ನಮ್ಮ ದೇಶದಲ್ಲ ಕಾಣುತ್ತಿದ್ದೇವೆ. ಭಯೋತ್ಪಾದನೆ, ಯುದ್ಧೋತ್ಪಾದನೆಯನ್ನು ಜಗತ್ತಿನಲ್ಲಿ ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಾಮರಸ್ಯದ ಕಡೆ ಸಾಹಿತ್ಯದ ಪಯಣ ಹೋಗುವುದು ದೊಡ್ಡ ಮೌಲ್ಯವಾಗಿದೆ. ದ್ವೇಷಾತೀತ ಭಾರತವನ್ನು ಕಟ್ಟುವ ಸಂದರ್ಭದಲ್ಲಿ ನಾವಿದ್ದೇವೆ ಎಂದರು.
20ನೇ ಶತಮಾನದಲ್ಲಿ ಮುಂದೆ ಜಾತಿ ವಿನಾಶ ಆಗಲಿದೆ ಎಂದು ಭಾವಿಸಿದೆವು. ಆದರೆ 21ನೇ ಶತಮಾನದಲ್ಲಿ ಜಾತಿ ವಿಕಾಸವಾಗುತ್ತಿದೆ. ಜಾತಿ ಜೈಲುಗಳಲ್ಲಿ ಬಂದಿಯಾಗಿರುವುದನ್ನು, ಧರ್ಮದ್ವೇಷದ ದ್ವೀಪಗಳನ್ನು ನೋಡುತ್ತಿದ್ದೇವೆ. ಈ ದ್ವೀಪಗಳನ್ನು ದಾಟಬೇಕಾಗಿದೆ. ಜಾತಿ ಜೈಲುಗಳಿಂದ ವಿಮೋಚನೆಗೊಳ್ಳಬೇಕಾಗಿದೆ ಎಂದರು.ಕನ್ನಡ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ. ಹಾಗಾಗಿ ಸಾವಿರಾರು ವರ್ಷಗಳಿಂದ ಕನ್ನಡ ಉಳಿದಿದೆ. ಕನ್ನಡದ ಆಶಯ, ಸಂವೇದನೆಗಳನ್ನು ಯಾರೋ ನಾಶ ಮಾಡುತ್ತೇವೆ ಎಂದು ಭಾವಿಸಿದರೆ ಅದನ್ನು ಸೋಲಿಸುವ ಶಕ್ತಿ ಕನ್ನಡಕ್ಕಿದೆ. ಇದಕ್ಕೆ ಕಾರಣ ಸಾಮಾನ್ಯ ಕನ್ನಡಿಗರು. ಇವರು ಕನ್ನಡ ಉಳಿಸಿ, ಬೆಳೆಸುತ್ತಿದ್ದಾರೆ. ಭಾಷೆಯನ್ನು ಬಳಸುವವರು ಮಾತ್ರ ಭಾಷೆಯನ್ನು ಬೆಳೆಸಬಲ್ಲರು ಎಂದು ಅಭಿಪ್ರಾಯಪಟ್ಟರು.ಪರಿಷತ್ತು ಯಾರ ಗುತ್ತಿಗೆಯೂ ಅಲ್ಲ. ಅದು ಕನ್ನಡಿಗರ ಸೊತ್ತು. ಸರ್ವಾಧಿಕಾರ ಯಾವತ್ತೂ ಸಾಂಸ್ಕೃತಿಕ ಸಂಸ್ಥೆಗಳಿಗೆ ತಕ್ಕುದಲ್ಲ. ಸಾಂಸ್ಕೃತಿಕ ಸಂಸ್ಥೆ ಪ್ರಜಾಸತ್ತಾತ್ಮಕವಾಗಿ ಇರಬೇಕು. ಸಂವೇದನಾಶೀಲತೆ ಇರಬೇಕು. ಇಲ್ಲಿಗೆ ಬಂದು ಕೂತವರು ತಮ್ಮದೆ ಕುರ್ಚಿ ಎಂದು ತಿಳಿದುಕೊಂಡರೆ ಅದಕ್ಕಿಂತ ನಗೆಪಾಟಲು ಬೇರಿಲ್ಲ. ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಕುಬ್ಜನಾಗಬಾರದು. ಕುರ್ಚಿಗಿಂತ ಮನುಷ್ಯ ದೊಡ್ಡವನಾಗಬೇಕು. ಇದನ್ನು ಅರ್ಥ ಮಾಡಿಕೊಂಡವರಿಗೆ ಸಾಂಸ್ಕೃತಿಕ ಪ್ರ ಜ್ಞೆ ಇರುತ್ತದೆ ಎಂದು ತಿಳಿಸಿದರು.
ಆಶಯ ನುಡಿಯಾಗಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ, ಕಳೆದ ಎರಡು ತಿಂಗಳಿಂದ 25ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ತಯಾರಿ ಮಾಡುತ್ತಿದ್ದೇವೆ. ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಬಹಳಷ್ಟು ತೊಂದರೆ ನೀಡಲಾಗಿದೆ. ನಾನು ಸದಾ ಕಾನೂನು ಹಾಗೂ ಸಂವಿಧಾನಕ್ಕೆ ತಲೆಬಾಗುತ್ತೇನೆ. ಆದರೆ ಕನ್ನಡದ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಬೇಸರದ ಸಂಗತಿ. ಸ್ನೇಹಿತರು ಹಾಗೂ ಎಲ್ಲಾ ಕನ್ನಡದ ಸುಮನಸ್ಸುಗಳು ಸೇರಿ ಇಂದು ಅದ್ದೂರಿಯಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷೆಯಾಗಿದೆ. ಕನ್ನಡ ಭಾಷೆಯ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು. ಕನ್ನಡದ ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕು. ಯಾವುದೇ ರೀತಿಯ ಅಡೆತಡೆಗಳು ಉಂಟಾಗಬಾರದು. ನಾವು ಯಾರು ಇಲ್ಲಿ ಶಾಶ್ವತವಾಗಿ ಉಳಿಯಲು ಬಂದಿಲ್ಲ. ಮಾನವನಾಗಿ ಹುಟ್ಟಿದರೆ ಮಾನವನಾಗಿ ಬದುಕಬೇಕು ಎಂದು ಹೇಳಿದರು.
ತಾವು ದಾಂಡೇಲಿಯಲ್ಲಿ ಬೆಳೆದ ಹಿನ್ನೆಲೆ ನೆನಪಿಸಿಕೊಂಡ ಅವರು, ಇಲ್ಲಿನ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು. ವಿಶೇಷವಾಗಿ ದಾಂಡೇಲಿಯ ಅಭಿವೃದ್ಧಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿದರು.ಈ ಸಂದರ್ಭ ಸಮ್ಮೇಳನಾಧ್ಯಕ್ಷ ರೋಹಿದಾಸ ನಾಯ್ಕ, ತಹಶೀಲ್ದಾರ್ ಶೈಲೇಶ್ ಪರಮಾನಂದ, ಡಿ.ವೈ.ಎಸ್.ಪಿ ಶಿವಾನಂದ ಎಂ., ವೆಸ್ಟ್‌ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ನಗರಸಭಾ ಅಧ್ಯಕ್ಷ ಅಷ್ಟಾಕ್ ಶೇಖ್ ಸೇರಿದಂತೆ ಹಲವಾರು ಸಾಹಿತಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಸಮ್ಮೇಳನಾಧ್ಯಕ್ಷರ ಮಾತು
ಸೃಜನಶೀಲ ಪ್ರತಿಭೆ, ಸಂಶೋಧನಾದೃಷ್ಟಿ, ವೈಚಾರಿಕ ಎಚ್ಚರಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡಾಗ ಈ ಜಿಲ್ಲೆಯ ಸಾಹಿತ್ಯಕ ಸಾಧನೆಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಇಷ್ಟು ದೊಡ್ಡ ಸಂಖ್ಯೆಯ ಬರಹಗಾರರ ಪಡೆ ಇರುವ ಇನ್ನೊಂದು ಜಿಲ್ಲೆ ಇದೆಯೇ ಎಂದು ಅನುಮಾನಪಡುವಂತಾಗುತ್ತದೆ ಎಂದು ಸಮ್ಮೇಳನಾಧ್ಯಕ್ಷ ರೋಹಿದಾಸ ನಾಯಕ ಹೇಳಿದರು.ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಗೌರವವೂ ಸೇರಿದಂತೆ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದ ಬಹಳಷ್ಟು ಲೇಖಕರು ಉತ್ತರ ಕನ್ನಡಕ್ಕೆ ಸೇರಿದವರೆಂಬುದನ್ನು ಅಭಿಮಾನದಿಂದ ನೆನೆಯಬೇಕಾಗಿದೆ. ನನ್ನ ತಿಳುವಳಿಕೆಯ ಆಚೆ ಇರುವ ಅಥವಾ ನನ್ನ ಮರೆಯಿಂದ ಬಿಟ್ಟು ಹೋಗಿರುವ ಇನ್ನು ಕೆಲವು ಬರಹಗಾರರು ಇದ್ದಿರಬಹುದು. ಒಟ್ಟಾರೆ, ಕ್ರಮಬದ್ಧ ಮಾಹಿತಿಗಳನ್ನೊಳಗೊಂಡ ಸಮಗ್ರ ಎನ್ನಬಹುದಾದ ಜಿಲ್ಲಾ ಕನ್ನಡ ಸಾಹಿತ್ಯ ಚರಿತ್ರೆಯೊಂದರ ಅಗತ್ಯದ ಬಗ್ಗೆ ಗಮನ ಸೆಳೆಯುವ ಹಿನ್ನೆಲೆ ಇವರೆಲ್ಲರ ನೆನಪು ಮಾಡಿಕೊಂಡಿದ್ದೇನೆ. ಸಾಹಿತಿ ಎನಿಸಿಕೊಳ್ಳುವವನು ತಾನಿನ್ನು ಬೆಳೆಯಬೇಕಾದವನು ನಮ್ಮಗಿಂತ ಪ್ರತಿಭಾವಂತರಾದ ದೊಡ್ಡ ಸಾಹಿತಿಗಳನ್ನು ನೆನಸಿ ಅಹಂಕಾರಿಯಾಗದೇ ವಿನಯಶಾಲಿಯಾಗಿರಬೇಕು ಎಂದು ಹೇಳಿದರು. ಭಾರತ ದೇಶದಲ್ಲಿ ಮಾತ್ರವಲ್ಲ ದೇಶಾದ್ಯಂತ ಕನ್ನಡ ತಿಳಿಸಲು ಕನ್ನಡ ಸಾಹಿತ್ಯ ಸಮ್ಮೇಳನ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರಬೇಕು ಎಂದರು.