ನಾಪೋಕ್ಲು: ಸಂಪಾಜೆ ಗ್ರಾಮದ ಪೆಲ್ತಡ್ಕ, ಗೂನಡ್ಕದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ರಾತ್ರಿ ವೇಳೆ ಕೃಷಿ ತೋಟಕ್ಕೆ ನುಗ್ಗಿ ಅಪಾರ ಕೃಷಿ ನಾಶ ಮಾಡಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಗೂನಡ್ಕದ ಪ್ರಮೀಳ ಅವರ ಮನೆಯ ಮುಂಭಾಗದಲ್ಲಿ ಗುರುವಾರ ರಾತ್ರಿ ಕಾಡಾನೆ ಹಿಂಡು ಕಾಣಿಸಿಕೊಂಡಿದೆ. ಭಯಗೊಂಡ ಮನೆಯವರು ಸಿಡಿಮದ್ದು ಸಿಡಿಸಿ ಆನೆಗಳನ್ನು ಓಡಿಸಿದ್ದಾರೆ. ಆದರೆ ಬಳಿಕ ಕಾಡಾನೆ ಹಿಂಡು ತೋಟಕ್ಕೆ ನುಗ್ಗಿ ತೆಂಗು, ಅಡಕೆ, ಬಾಳೆ ಗಿಡಗಳನ್ನು ಹಾನಿಮಾಡಿದೆ. ಅಲ್ಲದೆ ಅಕ್ಕ ಪಕ್ಕದ ನಿವಾಸಿಗಳಾದ ಗಣೇಶ, ಜಗನ್ನಾಥ, ವಸಂತ, ಮನಮೋಹನ ಅವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ. ಕಾಡಾನೆ ದಾಂದಲೆಯಿಂದ ಈ ವ್ಯಾಪ್ತಿಯ ಕೃಷಿಕರು ಆತಂಕಕ್ಕೊಳಗಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಹಾನಿಗೊಳಗಾದ ಕೃಷಿಕರ ತೋಟಕ್ಕೆ ಭೇಟಿ ನೀಡಿ, ಆನೆ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಕೃಷಿ ಹಾನಿಗೊಳಗಾದವರಿಗೆ ನಷ್ಟ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.