ಕಮಲನಗರ: ರೈತ ಸಮುದಾಯದ ಸಂಭ್ರಮದ ಹಬ್ಬವಾಗಿರುವ ಎಳ್ಳಮಾವಾಸ್ಯೆ ಆಚರಣೆಯನ್ನು ಕಮಲನಗರ ತಾಲೂಕಿನಾದ್ಯಂತ ರೈತಾಪಿ ವರ್ಗದವರು ಸಡಗರ, ಸಂತೋಷದಿಂದ ಶುಕ್ರವಾರ ಆಚರಿಸಿದರು.ಗ್ರಾಮೀಣ ಪ್ರದೇಶದ ವಿಶೇಷ ಮತ್ತು ರೈತರ ಹಬ್ಬವೆಂದೆ ಹೇಳಲಾಗುವ ಈ ಎಳ್ಳಮಾವಾಸ್ಯೆ ಎಲ್ಲಾ ಗ್ರಾಮಗಳಲ್ಲಿ ಆಚರಿಸಲಾಯಿತು. ಬೆಳಿಗ್ಗೆ ತಮ್ಮ ಜಮೀನುಗಳಿಗೆ ತೆರಳಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಜೋಳ, ಕಡಲೆ ಬೆಳೆಗಳಲ್ಲಿ ಭೂಮಿಗೆ ನೈವೇದ್ಯೆ (ಚರಗ) ಸಲ್ಲಿಸಿ ಪೂಜೆ ನೇರವೇರಿಸಿ ಚರಗ ಚೆಲ್ಲಿಸುತ್ತಿರುವಾಗ ಭೂಮಿ ತಾಯಿಗೆ ನಮಿಸಿದ ರೈತರು ಉತ್ತಮ ಫಸಲು ನೀಡುವಂತೆ ಭೂತಾಯಿಗೆ ಬೇಡಿಕೊಂಡರು.ನಂತರ ವಿಶೇಷ ಖಾದ್ಯವಾದ ಭಜ್ಜಿ, ಕಡುಬು, ಶೆಂಗಾ ಹೋಳಿಗೆ, ಎಣ್ಣೆಗಾಯಿ, ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಬಗೆ ಬಗೆಯ ಚಟ್ನಿ ಪುಡಿಗಳಿರುವ ವಿಶೇಷ ಖಾದ್ಯವನ್ನು ಬಂಧು ಬಾಂಧ್ಯವರೆಲ್ಲರೂ ಕೂಡಿಕೊಂಡು ಸಾಮೂಹಿಕ ಭೋಜನ ಸವಿದರು.ಈ ಸಂದರ್ಭದಲ್ಲಿ ಎಸ್‌ಬಿಐ ವ್ಯವಸ್ಥಾಪಕರಾದ ಪ್ರೇಮಕುಮಾರ, ಭಾಲ್ಕಿ ಕಾಂಗ್ರೆಸ್ ಮುಖಂಡರಾದ ವಿಲಾಸ ಮೋರೆ, ಭೀಮರಾವ್ ಸೂರ್ಯವಂಶಿ, ಮೋಸಿನ್ ಬಾಗವಾನ್, ಸಂದೀಪ ಬನಸೋಡೆ, ರಾಜಕುಮಾರ ನಿಲಂಗೆ, ಮಹೇಬೂಬಸಾಬ್ ಡೊಂಗರೆ, ಅಲೀಂ ಬಾಗವಾನ್, ಅಕ್ಬರ್ ಬಾಗವಾನ್, ಸಚಿನ್ ಜಾಧವ, ಪ್ರಶಾಂತ ಗಾಯವಾಡ, ಸುಭಂ ಮಿರ್ಚೆ, ದಿಲೀಪ ಸೋಮವಂಶೆ, ಸುಜಾತಾ ಸಿಂಧೆ, ಉಷಾ ಬನಸೋಡೆ ಹಾಗೂ ರಮಾಬಾಯಿ ಕೋಣಿ ಮತ್ತಿತರಿದ್ದರು.