ಚಳ್ಳಕೆರೆ: ಮಾ.11ರಂದು 5 ವರ್ಷಕ್ಕೊಮ್ಮೆ ನಡೆಯುವ ಚಳ್ಳಕೆರೆಯಮ್ಮನ ವಿಶೇಷ ಜಾತ್ರಾ ಮಹೋತ್ಸವ ನಡೆಯಲಿದ್ದು, ಎಲ್ಲಾ ಭಕ್ತರು ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ದೇವಸ್ಥಾನದ ಧರ್ಮದರ್ಶಿ, ಆಯಗಾರರು ಹಾಗೂ ದೈವಸ್ಥರು ಮನವಿ ಮಾಡಿದ್ದಾರೆ.
ಪ್ರಸ್ತುತ ಚಳ್ಳಕೆರೆಯಮ್ಮ ದೇವಸ್ಥಾನದ ಉಳಿತಾಯ ಖಾತೆಯಲ್ಲಿ 32 ಲಕ್ಷ ರು. ವೀರಭದ್ರಸ್ವಾಮಿ ದೇವಸ್ಥಾನದ ಉಳಿತಾಯ ಖಾತೆಯಲ್ಲಿ 21 ಲಕ್ಷ ರು. ಹಣವಿದೆ. ಪ್ರತಿ ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ದೇವಸ್ಥಾನದ ಆದಾಯ ಮತ್ತು ಖರ್ಚು ವೆಚ್ಚಗಳ ಬಗ್ಗೆ ಲಿಖಿತ ಮೂಲಕ ಕರಪತ್ರವನ್ನು ಹಂಚಲಾಗುತ್ತದೆ. ಆದರೂ ದೇವಸ್ಥಾನದ ಆಡಳಿತ ಮಂಡಳಿತ ವಿರುದ್ಧ ಹಣ ದುರುಪಯೋಗ ಮಾಡಿರುವುದು ದೈವದ ವಿರುದ್ಧ ಮಾಡಿದ ಆರೋಪವಾಗಿದೆ ಎಂದಿದ್ದಾರೆ.
ಆಯಗಾರರ ಪ್ರಮುಖ ಮುಖಂಡ, ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿ ಮಾಹಿತಿ ನೀಡಿ, ಈ ಎರಡೂ ದೇವಸ್ಥಾನಗಳಿಗೆ ೬೦೦ ವರ್ಷಗಳ ಇತಿಹಾಸವಿದೆ. ಯಾವುದೇ ಸ್ಥಿರ ಮತ್ತು ಚರ ಆಸ್ತಿ ಇರುವುದಿಲ್ಲ.ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ದೇಸ್ಥಾನದ ಒಕ್ಕಿಲ ಭಕ್ತರು, ಬಾವುಟ ಹರಾಜಿನ ಸಂದರ್ಭದಲ್ಲಿ ಬರುವ ಹಣದಿಂದ ಮಾತ್ರ ಎಲ್ಲಾ ಧಾರ್ಮಿಕ ಕಾರ್ಯ ನಡೆಸಬೇಕಲ್ಲದೆ, ಪ್ರತಿ ತಿಂಗಳು ಕೆಲಸ ನಿರ್ವಹಿಸುವ ನೌಕರರ ಹಾಗೂ ಪೂಜಾರರಿಗೆ ಸಂಬಳ ನೀಡಬೇಕಾಗುತ್ತದೆ. ಎರಡೂ ದೇವಸ್ಥಾನಗಳ ಹಣಕಾಸಿನ ವ್ಯವಹಾರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಆರೋಪ, ಅಸಮಧಾನ ಇಲ್ಲ.
ಆದರೆ, ಬಸವರಾಜು ಎಂಬುವವರು ಕಳೆದ ಕೆಲವು ವರ್ಷಗಳಿಂದ ಟ್ರಸ್ಟ್ ಮಾಡಬೇಕೆಂಬ ಬಗ್ಗೆ ವಿಚಾರವೆತ್ತಿದಾಗ ಆಡಳಿತ ಮಂಡಳಿ ಇದನ್ನು ತಿರಸ್ಕರಿಸಿದ್ದು, ಇದನ್ನು ಸಹಿಸದ ಬಸವರಾಜು ಆರೋಪ ಮಾಡುತ್ತಿದ್ದಾರೆ. ಯಾವುದೇ ಮಾಹಿತಿ ಬೇಕಾದಲ್ಲಿ ಗೌಡ್ರರಾಮಣ್ಣ ಧರ್ಮದರ್ಶಿ ಮೊ.೯೦೦೨೦ ೨೧೨೯೦ ಸಂಪರ್ಕಿಸಲು ಮನವಿ ಮಾಡಿದ್ದಾರೆ.ದೇವಸ್ಥಾನದ ಆಡಳಿತ ಮಂಡಳಿತ ಮುಖಂಡರಾದ ಗೊಲ್ಲಗೌಡನಾಗಣ್ಣ, ದಳವಾಯಿಮೂರ್ತಿ, ತಳವಾರ ಈರಣ್ಣ, ದೊರೆಗಳಪ್ರಸನ್ನ, ದೇವಿಪ್ರಸಾದ್, ದಳವಾಯಿವೆಂಕಟೇಶ್, ಚಿಕ್ಕಣ್ಣಗೌಡ, ಬುಡ್ಡವೀರಣ್ಣ, ಮಜ್ಜಿಗೆವೀರೇಶ್, ಎಂ.ಬಿ.ಮಲ್ಲಪ್ಪ, ಮಡಿವಾಳರ ಧನಂಜಯ, ರುದ್ರಪ್ಪ, ಎನ್.ನಾಗರಾಜು, ಸೂರಪಾಪಣ್ಣ, ಮಲ್ಲಿಕಾರ್ಜುನಸ್ವಾಮಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.