ತಂಬ್ರಹಳ್ಳಿ: ಹೊಸಪೇಟೆಯಲ್ಲಿ ಜ.೨೫ರಂದು ನಡೆಯುವ ವಿಜಯನಗರ ಜಿಲ್ಲಾ ಲಿಂಗಾಯತ ಸಮಾವೇಶ ಹಾಗೂ ೨೦೨೫-೨೬ನೇ ಸಾಲಿನ ಮೂರನೇ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ಲಿಂಗಾಯತ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವಿಜಯನಗರ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಮಾವಿನಹಳ್ಳಿ ತಿಳಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಡೇರುವ ನಿಟ್ಟಿನಲ್ಲಿ ಲಿಂಗಾಯತ ಸಮುದಾಯ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ರಾಜ್ಯ ಸರ್ಕಾರ ಲಿಂಗಾಯತ ಸಮುದಾಯಕ್ಕೆ ೨ಡಿ ಮೀಸಲಾತಿ ನೀಡಿ ಕೇಂದ್ರಕ್ಕೆ ಕಳುಹಿಸಿದ್ದು, ಕೇಂದ್ರ ಸರ್ಕಾರ ಮಾಡುವಲ್ಲಿ ಮೀನಮೇಷ ಎಣಿಸುತ್ತಿರುವುದು ಬೇಸರ ತರಿಸಿದೆ. ಪ್ರತಿ ಲಿಂಗಾಯತ ಬಸವಣ್ಣನವರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಲಿಂಗ ಕಟ್ಟಿಕೊಳ್ಳುವ ಎಲ್ಲರೂ ಲಿಂಗಾಯತರೇ ಮಕ್ಕಳಿಗೆ ಲಿಂಗಾಯತ ಧರ್ಮದ ಅರಿವು ಮೂಡಿಸಬೇಕಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಿಂಗಾಯತ ಧರ್ಮ ಜಾಗೃತಿ ಸಭೆಗಳನ್ನು ಮಾಡಲಾಗಿದೆ. ವಿಜಯನಗರದಲ್ಲಿಯೂ ಬೃಹತ್ ಸಭೆಯ ಮೂಲಕ ಲಿಂಗಾಯತ ಧರ್ಮದ ಜಾಗೃತಿ ಮೂಡಿಸಲಾಗುವುದು ಎಂದರು.
ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಮಾತನಾಡಿ, ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮಿಗಳು ಲಿಂಗಾಯತ ಪ್ರತೇಕ ಧರ್ಮದ ಹೋರಾಟಕ್ಕೆ ಬೃಹತ್ ಅಡಿಪಾಯ ಹಾಕಿದ್ದರು. ರಾಜ್ಯದ ವಿರಕ್ತಮಠದ ಸ್ವಾಮೀಜಿಗಳೆಲ್ಲ ಬಸವಧರ್ಮ ಪರಿಪಾಲನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಶಸ್ವಿಯಾಗುವ ಹೊತ್ತಿನಲ್ಲಿಯೇ ಇನ್ನೊಂದು ಧರ್ಮದವರು ರಾಜಕಾರಣಿಗಳ ಕಿವಿ ಕಡೆದು ಆಗುವುದನ್ನು ತಪ್ಪಿಸಿರುವುದು ಬೇಸರ ತರಿಸಿದೆ. ಲಿಂಗಾಯತ ಸಮಾವೇಶಗಳ ಮೂಲಕ ಎಲ್ಲರೂ ಕೇಂದ್ರ ಸರ್ಕಾರವನ್ನು ಎಚ್ಚರಿಸಬೇಕಿದೆ. ಲಿಂಗಾಯತ ಧರ್ಮ ಕಾಯಕವನ್ನು ಪ್ರೀತಿಸುವ ಧರ್ಮವಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಅವರು ಲಿಂಗಾಯತ ಧರ್ಮ ಪ್ರತ್ಯೇಕ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶರಣಸಾಹಿತ್ಯ ಸಂಶೋಧಕ ಡಾ.ರವೀಂದ್ರನಾಥ, ಅಕ್ಕಿ ಮಲ್ಲಿಕಾರ್ಜುನ, ಬಸವರಾಜ ಕಣಿವಿಹಳ್ಳಿ, ಸಿದ್ದಲಿಂಗಪ್ಪ, ಶಿವಮೂರ್ತಿ, ತಂಬ್ರಹಳ್ಳಿ ಮುಖಂಡರಾದ ಅಕ್ಕಿ ತೋಟೇಶ್, ಗೌರಜ್ಜನವರ ಬಸವರಾಜಪ್ಪ, ಪಟ್ಟಣಶೆಟ್ಟಿ ಸುರೇಶ, ಗೌರಜ್ಜನವರ ಗಿರೀಶ್, ಅಕ್ಕಿ ವೀರಣ್ಣ, ರೆಡ್ಡಿ ಮಂಜುನಾಥ ಪಾಟೀಲ್, ಟಿ.ಜಿ ದೊಡ್ಡಬಸಪ್ಪ, ಮೈನಳ್ಳಿ ಸುರೇಶ, ಹೊಟ್ಟಿ ವೀರಣ್ಣ, ಬಾಲಿಕಾಯಿ ವೀರೇಶ್, ಕೊಟಿಗಿ ಕೊಟ್ರೇಶ, ಆನೇಕಲ್ ಯೋಗಿಶಪ್ಪ, ಗೌಡ್ರು ರಾಜಣ್ಣ, ವೀರನಗೌಡ ಇತರರಿದ್ದರು.