ಕನ್ನಡಪ್ರಭ ವಾರ್ತೆ ಭೇರ್ಯಭೇರ್ಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ನೂತನ ತುರ್ತು ವಾಹನವನ್ನು (ಆ್ಯಂಬುಲೆನ್ಸ್) ಡಿ.ರವಿಶಂಕರ್ ಸೋಮವಾರ ಲೋಕಾರ್ಪಣೆ ಮಾಡಿದರು.
ಪ್ರತಿಯೊಂದು ಜೀವಗಳು ಅಮೂಲ್ಯವಾಗಿದ್ದು, ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತೀ ಮುಖ್ಯವಾಗಿದೆ. ಕೂಡಲೇ ಆ್ಯಂಬುಲೆನ್ಸ್ ಸೇವೆ ಲಭ್ಯವಾದರೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಲು ಸಾಧ್ಯವಾಗುತ್ತದೆ. ಏಕೆಂದರೆ ಕಳೆದ ತಿಂಗಳು ಮಹಿಳೆಯೊಬ್ಬರಿಗೆ ಹೃದಯಘಾತವಾಗಿ ಮೃತಪಟ್ಟರು. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಂದಿದ್ದರೆ ಆ ಮಹಿಳೆ ಸಾಯುತ್ತಿರಲಿಲ್ಲ. ಕುಟುಂಬದವರು ಹಾಗೂ ಯುವಕರು ಆಸ್ಪತ್ರೆಯ ಮುಂದೆ ಪ್ರತಿಭಟಿಸಿದ್ದರು. ಇದನ್ನೆಲ್ಲ ಮನಗಂಡು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮತ್ತು ಡಿಎಚ್ಒ ಅವರೊಡನೆ ಚರ್ಚಿಸಿ ಭೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಆಂಬ್ಯುಲೆನ್ಸ್ ಕೊಡಿಸಿರುವುದಾಗಿ ಅವರು ಹೇಳಿದರು.
ಸಾಲಿಗ್ರಾಮ ಪಟ್ಟಣದ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆ ಆದ ಕೂಡಲೇ ಭೇರ್ಯ ಗ್ರಾಮದ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಮುದಾಯ ಆರೋಗ್ಯ ಕೇಂದ್ರ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಕೂಡಲೇ ಮಂಜೂರು ಮಾಡುವಂತೆ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.ಬಳಿಕ ಟಿಎಚ್ಒ ಡಾ.ಡಿ. ನಟರಾಜು ಮಾತನಾಡಿ, ಭೇರ್ಯ ಆರೋಗ್ಯ ಕೇಂದ್ರದಲ್ಲಿ ಅಪಘಾತ, ವಿಷಸೇವನೆ ಸೇರಿದಂತೆ ಅನೇಕ ಅವಘಡಗಳು ಸಂಭವಿಸಿದ್ದರೂ ಆಂಬ್ಯುಲೆನ್ಸ್ ಬೇರೆ ಕಡೆಯಿಂದ ಬರಬೇಕಿತ್ತು, ಅಷ್ಟರಲ್ಲಿ ಅವಘಡ ಉಂಟಾದ ರೋಗಿಗೆ ಚಿಕಿತ್ಸೆ ಲಭ್ಯವಾಗದೆ ಜೀವ ಹೋಗುವ ಪರಿಸ್ಥಿತಿ ಇತ್ತು. ಇಂತಹ ಪರಿಸ್ಥಿತಿಯ ಬಗ್ಗೆ ಶಾಸಕರ ಗಮನಕ್ಕೆ ತಂದು, ಸರ್ಕಾರದಿಂದ. ಆ್ಯಂಬುಲೆನ್ಸ್ ಕೊಡಿಸುವಂತೆ ಮನವಿ ಮಡಿದ ಹಿನ್ನೆಲೆಯಲ್ಲಿ ಶಾಸಕರು ಮನವಿಗೆ ಸ್ಪಂದಿಸಿ ವಾರದೊಳಗೆ ಆಂಬ್ಯುಲೆನ್ಸ್ ಕೊಡಿಸಿದ್ದಾರೆ. ಇಲಾಖೆಯ ಮುಖ್ಯಸ್ಥನಾಗಿ ಧನ್ಯವಾದ ಜೊತಗೆ ಅಭಿನಂದಿಸುತ್ತೇನೆ ಎಂದರು.