ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಲೆಯಲ್ಲಿ ವಿಶೇಷ ಪ್ರಾವಿಣ್ಯತೆ ಹೊಂದಿರುವ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ವಿಶೇಷವಾಗಿ ಒತ್ತು ನೀಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭರವಸೆ ನೀಡಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀವಿಶ್ವಕರ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಮ್ಮ ಚಿತ್ರಕಲೆಯ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿರುವ ವಿಶ್ವಕರ್ಮ ಸಮುದಾಯ ಚಿಕ್ಕ ಸಮುದಾಯ ಎಂಬ ಭಾವನೆ ಬಿಡಬೇಕು ಎಂದರು.
ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀರಾಮನ ಮೂರ್ತಿಯನ್ನು ಕೆತ್ತಿರುವ ಕೀರ್ತಿ ವಿಶ್ವಕರ್ಮ ಸಮುದಾಯಕ್ಕೆ ಸೇರುತ್ತದೆ. ಇಂತಹ ಸಮಾಜ ಕಲೆಗೆ ಹೆಸರುವಾಸಿಯಾಗಿ ಬೇಲೂರು, ಹಳೇಬೀಡು, ಐಹೋಳೆ, ಪಟ್ಟದಕಲ್ಲು ಸೇರಿದಂತೆ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿವೆ. ತಾಲೂಕಿನಲ್ಲಿ ಎಲ್ಲ ಸಮುದಾಯಗಳಿಗೂ ರಾಜಕೀಯ ಪ್ರಾತಿನಿಧ್ಯ ನೀಡಲು ಬದ್ಧನಾಗಿದ್ದು, ನಿಮ್ಮ ಸಮಾಜಕ್ಕೂ ಅವಕಾಶ ಸಿಗಲಿದೆ ಎಂದರು.ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷೆ ಪವಿತ್ರಾ ಮಾತನಾಡಿ, ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟೇಬಲ್ ಫೌಂಡೇಶನ್ ಸಂಸ್ಥೆಯ ಮೂಲಕ ಸಮುದಾಯದ ಅಭಿವೃದ್ಧಿಗೆ ಮುಂದಾಗಿದ್ದೇವೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೊಪ್ಪಳದ ಶ್ಯಾಡಲಗಿರಿ ಆನೆಗುಂದಿ ಸಂಸ್ಥಾನ ವಿಶ್ವಕರ್ಮ ಏಕದಂಡಗೀ ಮಠ ಸೂರ್ಯನಾರಾಯಣ ಸ್ವಾಮೀಜಿ ಮಾತನಾಡಿ, ಸಮುದಾಯ ಮುಖಂಡರು ಸಂಘಟಿತರಾಗಿ ಸಮಾಜದ ಅಭಿವೃದ್ಧಿ ಮುಂದಾಗಬೇಕು, ಎಲ್ಲಾ ಕ್ಷೇತ್ರಗಳಲ್ಲಿಯೂ ವಿಶ್ವಕರ್ಮ ಸಮುದಾಯಕ್ಕೆ ಅವಕಾಶ ಸಿಗುವಂತಾಗಬೇಕು ಎಂದರು.ಬೆಂಗಳೂರಿನ ವೇದ ಆಘಮನ ಸಂಸ್ಕೃತ ಮಹಾಪಾಠಶಾಲೆಯ ರಾಘವೇಂದ್ರ ಸ್ಥಪತಿ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್, ಡಿವೈಎಸ್‌ಪಿ ವಿ.ಕೃಷ್ಣಪ್ಪ, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಪ್ರಕಾಶ್, ತಾಲೂಕು ಘಟಕದ ಅಧ್ಯಕ್ಷ ಮಹೇಶ್, ಪ್ರಮುಖರಾದ ತಿರುಮಲಾಚಾರ್, ದೇವರಾಜು, ಕಮಲಾಚಾರ್, ವೈ.ಡಿ.ಶ್ರೀನಿವಾಸ್, ದೇವರಾಜು, ಯೋಗನರಸಿಂಹಚಾರ್, ಎಚ್.ಪಿ.ಸತೀಶ್, ಕೆ.ಆರ್.ನರಸಿಂಹಚಾರ್ ಇದ್ದರು.