ಕೃಷಿಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆಗೆ ಒತ್ತು ನೀಡಿ

KannadaprabhaNewsNetwork |  
Published : Jun 25, 2025, 11:50 PM IST
25ಕೆಪಿಎಲ್23 ನಗರದ ಜಿಲ್ಲಾ ಪಂಚಾಯತಿಯ ಜೆ. ಹೆಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕೊರ್ಸ್ನ ಪ್ರಮಾಣ ಪತ್ರದ ವಿತರಣಾ ಕಾರ್ಯಕ್ರಮ | Kannada Prabha

ಸಾರಾಂಶ

ಗಂಗಾವತಿ ಮತ್ತು ಸಿಂಧನೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸವಳಾಗಿದೆ. ಹಾಗಾಗಿ ರೈತರಿಗೆ ಎಷ್ಟು ಪ್ರಮಾಣದಲ್ಲಿ ನೀರು ಬಳಸಬೇಕು ಮತ್ತು ಗೊಬ್ಬರ ಹಾಕಬೇಕು ಎಂಬುದರ ಕುರಿತು ತಿಳಿಸಬೇಕಿದೆ.

ಕೊಪ್ಪಳ:

ರೈತರು ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಒತ್ತು ನೀಡುವ ಮೂಲಕ ಕಡಿಮೆ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.

ಕೇಂದ್ರ ಸರ್ಕಾರ, ಮ್ಯಾನೇಜ್ ಹೈದರಾಬಾದ್ ಸಮೇತಿ (ಉತ್ತರ ), ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ ಕೊಪ್ಪಳ (ಗಂಗಾವತಿ), ಕೃಷಿ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕೋರ್ಸ್‌ ಪ್ರಮಾಣ ಪತ್ರದ ವಿತರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಭಾರತ ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಶೇ. 65 ಪ್ರತಿಶತ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ತರಬೇತಿಯಲ್ಲಿ ತಾವು ಪಡೆದ ಜ್ಞಾನದ ಮಾಹಿತಿಯನ್ನು ರೈತರಿಗೆ ತಿಳಿಸಬೇಕು. ಈ ವರ್ಷ ಕಡಿಮೆ ರಾಸಾಯನಿಕ ಗೊಬ್ಬರ ಬಳಸಿ ಹೆಚ್ಚು ಬೆಳೆಯುವ ರೈತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಇನ್ನೂ ಹೆಚ್ಚಿನ ರೀತಿಯಲ್ಲಿ ಚರ್ಚೆಗಳನ್ನು ಬರುವ ದಿನಗಳಲ್ಲಿ ಮಾಡೋಣ. ತಮ್ಮ ತರಬೇತಿಯಿಂದ ರೈತರಿಗೆ ಅನುಕೂಲವಾಗುವ ಜತೆಗೆ ಜಿಲ್ಲೆಯ ಆದಾಯವೂ ಹೆಚ್ಚಾಗಬೇಕು ಎಂದರು.

ರಾಯಚೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಶಿವಶಂಕರ ಎನ್. ಮಾತನಾಡಿ, ಗಂಗಾವತಿ ಮತ್ತು ಸಿಂಧನೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸವಳಾಗಿದೆ. ಹಾಗಾಗಿ ರೈತರಿಗೆ ಎಷ್ಟು ಪ್ರಮಾಣದಲ್ಲಿ ನೀರು ಬಳಸಬೇಕು ಮತ್ತು ಗೊಬ್ಬರ ಹಾಕಬೇಕು ಎಂಬುದರ ಕುರಿತು ತಿಳಿಸಬೇಕು. ವಿವಿಯಿಂದ 7 ಜಿಲ್ಲೆಗಳಲ್ಲಿ ಮಣ್ಣಿನ ಪರೀಕ್ಷೆ ಮಾಡಲಾಗುತ್ತಿದೆ. ಮೊಬೈಲ್ ಸಾಯಿಲ್ ಟೆಸ್ಟ್ ಮಾಡಲಾಗುತ್ತಿದೆ. ರೈತರಿಗೆ ಸಮಗ್ರ ಕೃಷಿಯ ಕುರಿತು ಮಾಹಿತಿ ನೀಡಲು ಕಲ್ಯಾಣ ಕೃಷಿ ರೇಡಿಯೋ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕೃಷಿ ಮಹಾವಿದ್ಯಾಲಯ ಗಂಗಾವತಿಯ ವಿಶೇಷಾಧಿಕಾರಿ ಡಾ. ಯಂಜೇರಪ್ಪ ಎಸ್.ಟಿ. ಮಾತನಾಡಿ, ಭತ್ತ ಮತ್ತು ಟೊಮೆಟೊಗೆ ಝಿಂಕ್ ಬೇಕು. ಯೂರಿಯಾ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಭತ್ತಕ್ಕೆ ಸಾಕಷ್ಟು ರೋಗಗಳು ಬರುತ್ತಿವೆ. ಸಾರಜನಕ ಹೆಚ್ಚಿನ ಪ್ರಮಾಣದಲ್ಲಿ ಆದಾಗ ಹೀಗೆ ಆಗುತ್ತದೆ. ಮಣ್ಣು ಪರೀಕ್ಷೆ ಆಧಾರದ ಮೇಲೆ ಬೆಳೆಗೆ ಗೊಬ್ಬರ ನೀಡಬೇಕು. ರೈತರಿಗೆ ಸಾವಯವ ಗೊಬ್ಬರದ ಕುರಿತು ಮಾಹಿತಿ ನೀಡಬೇಕು. ರಾಸಾಯನಿಕ ಗೊಬ್ಬರ ಅವಶ್ಯವಿದ್ದಷ್ಟು ಮಾತ್ರ ಬಳಸಬೇಕೆಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ. ಮಾತನಾಡಿ, ಜಿಲ್ಲೆಯಲ್ಲಿ 447 ಜನರಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕೋರ್ಸ್ ಪ್ರಮಾಣ ಪತ್ರ ವಿತರಿಸಲಾಗಿದೆ. ಇದು 2ನೇ ಬ್ಯಾಚ್ ಆಗಿದ್ದು, ಇನ್ನೂ 17 ಜನರು ಉಳಿದಿದ್ದಾರೆ ಎಂದರು.

ಕೃಷಿ ತಂತ್ರಜ್ಞರ ಸಂಸ್ಥೆಯ ವೀರಣ್ಣ ಕಮತರ್ ಮಾತನಾಡಿ, 1970ರ ದಶಕದಲ್ಲಿ ಕೃಷಿ ಅಧಿಕಾರಿಗಳು ತಮ್ಮ ಜೀಪಿನಲ್ಲಿ ರಸಗೊಬ್ಬರ ತೆಗೆದುಕೊಂಡು ಹಳ್ಳಿಯ ರೈತರಿಗೆ ಕೊಡಲು ಹೋದಾಗ ಅವರು ವಿಷ ಕೊಡಲು ಬಂದಿದ್ದಾರೆ ಎನ್ನುತ್ತಿದ್ದರು. ಇಂದು ರಸಗೊಬ್ಬರಗಳ ಬಳಕೆಯಿಂದ ಆಹಾರ ಉತ್ಪಾದನೆ ಹೆಚ್ಚಾಗಿದೆ. ಆದರೆ, ಗುಣಮಟ್ಟಕ್ಕೆ ಬಂದರೆ ಗಂಗಾವತಿ ಭಾಗದ ಭತ್ತ ವಿಶ್ವಮಟ್ಟದಲ್ಲಿ ರಿಜೆಕ್ಟ್ ಆಗುತ್ತಿದೆ. ನಾವು ಕೃಷಿಯಲ್ಲಿ ಇಂದು ಹೆಚ್ಚಿನ ರಸಾಯನಿಕ ಬಳಕೆ ಮಾಡುತ್ತಿದ್ದು ಇದರಿಂದ ಸಾಕಷ್ಟು ಕ್ಯಾನ್ಸರ್ ಪ್ರಕರಣಗಳು

ಬರುತ್ತಿವೆ. ರೈತರ ಶ್ರೇಯೋಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು 15 ದಿನಗಳ ತರಬೇತಿ ಪಡೆದ 58 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಇದರಲ್ಲಿ ಕೊಪ್ಪಳ ಜಿಲ್ಲೆಯ 28 ಜನರು ಹಾಗೂ ವಿಜಯನಗರ ಜಿಲ್ಲೆಯ 30 ಜನರು ಪ್ರಮಾಣ ಪತ್ರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ, ಹಿರಿಯ ತಾಂತ್ರಿಕ ಅಧಿಕಾರಿ ಜಿ. ನಾರಪ್ಪ, ವಿಜ್ಞಾನಿ (ಬೀಜ ವಿಜ್ಞಾನ) ಡಾ. ರಾಧಾ ಜೆ, ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್