ಕುಸುಮ್- ಬಿ ಹಾಗೂ ಕುಸುಮ್- ಸಿ ಯೋಜನೆಯಡಿ ಸೌರ ವಿದ್ಯುತ್ ಉತ್ಪಾದನೆ
ರಾಜ್ಯದಲ್ಲಿ ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚಾಗಲಾರಂಭಿಸಿದ್ದು, ಪ್ರಸ್ತುತ ಪ್ರತಿದಿನ 17,500 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಹೀಗಾಗಿ ಸೌರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಸುಮ್- ಬಿ ಹಾಗೂ ಕುಸುಮ್- ಸಿ ಯೋಜನೆಯಡಿ ಸೌರ ವಿದ್ಯುತ್ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.ಒಂದು ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ 4 ಎಕರೆ ಜಾಗ ಬೇಕಾಗುತ್ತದೆ. ಸರ್ಕಾರಿ ಜಾಗ ಇದ್ದರೆ ಸೌರ ವಿದ್ಯುತ್ ತಯಾರಿಕೆಗೆ ಮುಂದೆ ಬರುವವರಿಗೆ ಉಚಿತವಾಗಿ ಜಾಗ ನೀಡಲಾಗುವುದು. ಆದರೆ, ಹೀಗೆ ಪಡೆಯುವ ಜಾಗಕ್ಕೆ ಪ್ರತಿ ವರ್ಷ ಎಕರೆಗೆ ₹25 ಸಾವಿರ ಪಾವತಿಸಬೇಕಾಗುತ್ತದೆ. ಹೀಗೆ ಪಾವತಿಯಾಗುವ ಹಣವನ್ನು ಯಾವ ಗ್ರಾಪಂ ವ್ಯಾಪ್ತಿಯಲ್ಲಿ ಸೌರ ವಿದ್ಯುತ್ ಸ್ಥಾವರ ಆರಂಭವಾಗಿರುತ್ತದೆಯೋ, ಆ ಪಂಚಾಯ್ತಿಗೆ ಹಣ ನೀಡಲಾಗುತ್ತದೆ. ಈ ಹಣವನ್ನು ಸ್ಥಳೀಯ ಅಂಗನ ವಾಡಿ ಹಾಗೂ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಟ್ರಾನ್ಸ್‌ಫಾರ್ಮರ್ ಕೊರತೆ ಇಲ್ಲ:
ರಾಜ್ಯದಲ್ಲಿ 4.50 ಲಕ್ಷ ಅಕ್ರಮ ಸಂಪರ್ಕ ಪಡೆದಿರುವ ಬೋರ್ ವೆಲ್ ಗಳಿವೆ. ಇವುಗಳ ವಿದ್ಯುತ್ ಸಂಪರ್ಕವನ್ನು ಸಕ್ರಮ ಗೊಳಿಸಬೇಕಾಗಿದೆ. ಹೀಗಾಗಿ ವಿದ್ಯುತ್ ಲೈನ್ ನಿಂದ 500 ಮೀ. ಒಳಗಡೆ ಇರುವ ಕೊಳವೆ ಬಾವಿಗಳಿಗೆ ಸಂಪರ್ಕ ಸಕ್ರಮ ಗೊಳಿಸಲಾಗುವುದು. 500 ಮೀ. ಗಿಂತ ದೂರ ಇರುವ ಕೊಳವೆ ಬಾವಿಗಳಿಗೆ ಕುಸುಮ್- ಬಿ ಯೋಜನೆ ಅಡಿ ಸೌರ ವಿದ್ಯುತ್ ಶಕ್ತಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಹಾಗೂ ಕೇಂದ್ರ ಸರ್ಕಾರದಿಂದ ಶೇ. 20 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಫಲಾನುಭವಿಗಳು ಶೇ. 20 ರಷ್ಟು ಹಣ ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.
ಚಿಕ್ಕಮಗಳೂರು ನಗರದಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪೈಪ್ ಲೈನ್ ಅಳವಡಿಕೆ ಕಾಮ ಗಾರಿ ನಡೆಯುತ್ತಿರುವುದರಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.