ಕೂಡಲಸಂಗಮೇಶ್ವರ ದೇಗುಲ ಅಭಿವೃದ್ಧಿಗೆ ಒತ್ತು

KannadaprabhaNewsNetwork | Published : Sep 24, 2024 1:51 AM

ಸಾರಾಂಶ

ನಾಗಗೊಂಡನಹಳ್ಳಿಯ ಹೊರವಲಯದ ವೇದಾವತಿ ನದಿ ತಟದಲ್ಲಿನ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕೂಡಲಸಂಗಮೇಶ್ವರ ಸ್ವಾಮಿಯ ದೇವಾಲಯ ಜೀರ್ಣೋದ್ಧಾರ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ನಾಗಗೊಂಡನಹಳ್ಳಿಯ ಹೊರವಲಯದ ವೇದಾವತಿ ನದಿ ತಟದಲ್ಲಿನ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕೂಡಲಸಂಗಮೇಶ್ವರ ಸ್ವಾಮಿಯ ದೇವಾಲಯ ಜೀರ್ಣೋದ್ಧಾರ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಗ್ರಾಮದವರು ಪುರಾಣ ಪ್ರಸಿದ್ಧ ಕೂಡಲ ಸಂಗಮೇಶ್ವರ ಸ್ವಾಮಿಯ ದೇವಾಲಯ ಸಮುಚ್ಛಚಯದ ಬಳಿ ಚಿತ್ರದುರ್ಗ ಜಿಲ್ಲಾ ಆಡಳಿತ, ಕೂಡಲ ಸಂಗಮೇಶ್ವರ ದೇವಾಲಯ ಸಮಿತಿ, ಚಿಲುಮೆ ಸ್ವಾಮಿ, ಆಂಜನೇಯ ಸ್ವಾಮಿ ದೇವಾಲಯ ಸೇವಾ ಸಮಿತಿ, ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಇಲಾಖೆ, ಗ್ರಾಮದ ವಿವಿಧ ಮಹಿಳಾ ಮತ್ತು ರೈತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ದೇವಾಲಯದ ಅಭಿವೃದ್ಧಿ ಮತ್ತು ಕ್ಷೇತ್ರವನ್ನು ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆಗೊಳಿಸುವ ಕುರಿತ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯರ ಒತ್ತಾಸೆಯಂತೆ ಜಿಲ್ಲಾಡಳಿತ ಕೂಡಲೇ ಈ ಕ್ಷೇತ್ರವನ್ನು ಪ್ರವಾಸೋದ್ಯಮ ಇಲಾಖೆಗೆ ಒಳಪಡಿಸಿ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ ಮಾತನಾಡಿ, ಚಳ್ಳಕೆರೆ ಕ್ಷೇತ್ರದ ಶಾಸಕರು ಮತ್ತು ಇಲ್ಲಿನ ಜನರು ವಿವಿಧ ಸಂಘಟನೆಗಳು ಒತ್ತಾಯದಂತೆ ಈ ಕೂಡಲಸಂಗಮೇಶ್ವರ ದೇವಾಲಯದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಗೊಳಿಸಿ, ಸರ್ಕಾರದ ನಿರ್ದೇಶನದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಚಿತ್ರದುರ್ಗ ಜಿಲ್ಲಾ ಪ್ರವಾಸೋದ್ಯಮ ಉಪನಿರ್ದೇಶಕ ಶಶಿಕುಮಾರ್ ಮಾತನಾಡಿ, ಜಿಲ್ಲಾಡಳಿತ ಮತ್ತು ಕ್ಷೇತ್ರದ ಶಾಸಕರ ಸೂಚನೆಯಂತೆ ಈ ವೇದಾವತಿ ನದಿ ದಡದಲ್ಲಿರುವ ಪುರಾತನ ಕಾಲದ ದೇವಾಲಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ರೈತ ಮುಖಂಡ ಕೆಪಿ ಬೂತಯ್ಯ ಮಾತನಾಡಿ, ಅನಾದಿಕಾಲದಿಂದಲೂ ಸಹ ಈ ಭಾಗದ ಜನರು ಇಲ್ಲಿನ ಪುರಾತನ ಪ್ರಸಿದ್ಧ ಕೂಡಲ ಸಂಗಮೇಶ್ವರ ದೇವಾಲಯ ಮತ್ತು ಶಿವಲಿಂಗ ರಕ್ಷಿಸಿಕೊಂಡು ಬಂದಿದ್ದಾರೆ. ಈಗ ವೇದಾವತಿ ನದಿ ದಡದ ಈ ಧಾರ್ಮಿಕ ಕ್ಷೇತ್ರವನ್ನು ಪ್ರವಾಸೋದ್ಯಮ ಇಲಾಖೆ ಒಳಪಡಿಸಿ, ರಕ್ಷಣೆಗೆ ಬಂದೋಬಸ್ತ್ ಒದಗಿಸಿ, ಸಂರಕ್ಷಣಿಸಬೇಕು. ಜತೆಗೆ ಈ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಜಾಜುರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕಮ್ಮ ಸುರೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ. ಪ್ರೇಮಕ್ಕ, ಸದಸ್ಯರಾದ ರಂಗನಾಥ, ವರಲಕ್ಷ್ಮಿ, ಸಿದ್ದೇಶ್ವರ, ಹಂಪಣ್ಣ, ನರಸಿಂಹಪ್ಪ, ರಂಜಾನ್, ಜಿಲ್ಲಾ ಪಂಚಾಯತಿ ಸಿ.ಎಸ್ ಸೋಮಶೇಖರ ಎಸ್ ಜೆ., ತಹಸೀಲ್ದಾರ್ ರೆಹಾನ್ ಪಾಶ, ಶಶಿಧರ, ಪಿಡಿಓ ಓಬಣ್ಣ, ಆರ್ ಐ. ರಾಜೇಶ, ರೈತ ಮುಖಂಡ ಕೆಪಿ ಬೂತಯ್ಯ, ಶಶಿಧರ, ಕ್ಯಾತಣ್ಣ, ಈರಣ್ಣ, ಮಂಜುನಾಥರು ಇದ್ದರು.

Share this article