ದೇವರಾಜು ಕಪ್ಪಸೋಗೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯದ ಗಡಿ ಜಿಲ್ಲೆಯ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಜಿಲ್ಲೆಯಲ್ಲಿ ಶಿಕ್ಷಣ, ಜಿಲ್ಲಾ ಕೇಂದ್ರದ ಕುಡಿಯುವ ನೀರು, ರಸ್ತೆಗಳು ಸೇರಿದಂತೆ ಮೂಲಭೂತ ಅಭಿವೃದ್ಧಿಗೆ ಕುತ್ತು ಬಿದ್ದಿದೆ. ಯಳಂದೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು 40 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಲಾಗಿದ್ದು, ಹಿಂದಿನ ಸಾಲಿನ ಬಜೆಟ್‌ಗಳಲ್ಲೂ ಘೋಷಣೆಯಾಗಿದ್ದರೂ ಅನುಷ್ಠಾನವಾಗಿರಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಮತ್ತೇ ಘೋಷಣೆ ಮಾಡಲಾಗಿದೆ.ಮುಂದಿನ ಸಾಲಿನಲ್ಲಿ:ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವನ್ನು ಸ್ಧಾಪಿಸುವ ಮೂಲಕ ಸಾರ್ವಜನಿಕರಿಗೆ ಕೈ ಗೆಟುಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಮುಂದಿನ 2025-26ನೇ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಯೋಗಾಲಯ (ಐಪಿಎಚ್‌ಎಲ್ ) ಸ್ದಾಪನೆ ಮಾಡಲಾಗುವುದು. ಈಗಾಗಲೇ ಸಿಮ್ಸ್‌ನಲ್ಲಿ ಸ್ಥಾಪನೆ ಮಾಡಲಾಗಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಮತ್ತು ಪಿಠೋಪಕರಣಗಳ ಖರೀದಿಗಾಗಿ 50 ಕೋಟಿ ರು. ಒದಗಿಸುವುದಾಗಿ ಬಜೆಟ್‌ನಲ್ಲಿ ಭರವಸೆ ನೀಡಲಾಗಿದೆ. ತಾರಾಲಯ:ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಚಟುವಟಿಕೆ ಆಧಾರಿತ ಪರಿಸರವನ್ನು ಒದಗಿಸಲು ಚಾಮರಾಜನಗರದಲ್ಲಿ ವಿಜ್ಞಾನ ಕೇಂದ್ರ ತಾರಾಲಯವನ್ನು ಕಾರ್ಯಾರಂಭ ಮಾಡಲಾಗುವುದು. ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರು. ವೆಚ್ಚದಲ್ಲಿ ಇಂಟರ್ ಪ್ರಿಟೇಷನ್ ಸೆಂಟರ್‌ಗಳನ್ನು ಜೆಎಲ್‌ಆರ್ ಸಂಸ್ಧೆಯ ಮೂಲಕ ನಿರ್ಮಾಣ ಮಾಡಲಾಗುವುದು. ಬಂಡೀಪುರದಲ್ಲಿ ಹೊಸ ಕಾರ್ಯಪಡೆ:ರಾಜ್ಯದಲ್ಲಿ ಈಗಾಗಲೇ 7 ಆನೆ ಕಾರ್ಯಪಡೆಗಳು ಹಾಗೂ 2 ಚಿರತೆ ಕಾರ್ಯಪಡೆಗಳನ್ನು ಬಲಪಡಿಸಲು 40 ಕೋಟಿ ರು. ಗಳನ್ನು ಒದಗಿಸಲಾಗಿದೆ. ಪ್ರಸಕ್ತ ವರ್ಷ ಬಂಡೀಪುರದಲ್ಲಿ ಒಂದು ಹೊಸ ಕಾರ್ಯಪಡೆಯನ್ನು ರಚಿಸಲಾಗುವುದು ಹಾಗೂ ಕಾರ್ಯಪಡೆಗಳಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಲಪಡಿಸಲು 10 ಕೋಟಿ ರು. ಹಂಚಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.ವಿಶೇಷ ಪ್ಯಾಕೇಜ್ ಇಲ್ಲ:ಚಾಮರಾಜನಗರ ಜಿಲ್ಲಾಕೇಂದ್ರವಾಗಿ 25 ವರ್ಷ ಪೂರೈಸಿದ್ದರೂ ಅಭಿವೃದ್ಧಿಯಾಗದ ನಿಟ್ಟಿನಲ್ಲಿ ಈ ಬಾರಿ ತಮ್ಮ ನೆಚ್ಚಿನ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪ್ಯಾಕೇಜ್ ನೀಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಯಾವುದೇ ಪ್ಯಾಕೇಜ್ ನೀಡಿಲ್ಲ.ಕುಡಿಯುವ ನೀರಿಗಿಲ್ಲ ಆದ್ಯತೆ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಇಂದಿಗೂ ವಾರಕ್ಕೊಮ್ಮೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲೇ ನೀರಿನ ಬವಣೆ ಇದೆ. ಎಲ್ಲ ಬಡಾವಣೆಗಳಿಗೂ ನಿತ್ಯ ಕಾವೇರಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ 276 ಕೋಟಿ ರು. ವೆಚ್ಚದ ಹೊಸ ಯೋಜನೆಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಹೊಸ ಯೋಜನೆಗೆ ಸಿದ್ದರಾಮಯ್ಯ ಅವರು ಕಾಳಜಿ ವಹಿಸದ ಪರಿಣಾಮ ಜಿಲ್ಲಾ ಕೇಂದ್ರದ ಜನತೆ ಕುಡಿಯವ ನೀರಿಗೆ ಬವಣೆ ಪಡುವುದು ಮುಂದುವರಿದಿದೆ.ಬೇಡಗಂಪಣರಿಗಿಲ್ಲ ಪ್ಯಾಕೇಜ್:ಜಿಲ್ಲೆಯ ಮಲೆ ಮಹದೇಶ್ವರಬೆಟ್ಟ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಬೇಡಗಂಪಣರು ವಾಸಿಸುವ ಹಾಡಿಗಳು ಮೂಲ ಸೌಕರ್ಯ ಕೊರತೆಯಿಂದ ಅತ್ಯಂತ ಹಿಂದುಳಿದಿವೆ. ಇವುಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನಿರೀಕ್ಷೆ ಮಾಡಲಾಗಿತ್ತು.ಪ್ರವಾಸೋದ್ಯಮ ಅಭಿವೃದ್ಧಿ ಮರಿಚೀಕೆ:ಚಾಮರಾಜನಗರ ಜಿಲ್ಲೆಯಲ್ಲಿ ಶೇ. 50ರಷ್ಟು ಅರಣ್ಯ ಪ್ರದೇಶವಿದ್ದು, ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಚಾಮರಾಜನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ, ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಪ್ಯಾಕೇಜ್ ಅದತ್ಯವಿತ್ತು. ಇಡೀ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಹೊಸ ಟೌನ್ ಶಿಪ್ ಇಲ್ಲ:ಚಾಮರಾಜನಗರ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೂ ಚಾಮರಾಜನಗರ ಪಟ್ಟಣದಲ್ಲಿ ಜನರಿಗೆ ಚುಡಾದಿಂದ ಯಾವುದೇ ನಿವೇಶನ ಹಂಚಿಕೆಯಾಗಿಲ್ಲ. ಹಾಗಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ನೂತನ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಹೊಸ ಟೌನ್ ಶಿಪ್ ನಿರ್ಮಿಸಬೇಕು ಎಂಬ ಬಹುದಶಕಗಳ ಕೂಗಿಗೆ ಬಜೆನಲ್ಲಿ ಯಾವುದೇ ಭರವಸೆ ಸಿಕ್ಕಿಲ್ಲ. ನೂತನ ವಿವಿಗೂ ಅನುದಾನವಿಲ್ಲ:ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡಿದೆ. ಆದರೆ, ಹೆಚ್ಚು ಅನುದಾನ ನೀಡದ ಪರಿಣಾಮ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಗಡಿ ಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲು ಈ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ ಮಾಡಲಾಗಿತ್ತು.ಆದರೆ, ಯಾವುದೇ ಅನುದಾನ ನೀಡಿಲ್ಲ. ಅಲ್ಲದೆ, ಮುಂದಿನ ಶೈಕ್ಷಣಿಕ ಸಾಲಿನಿಂದ ಈಗಾಗಲೇ ಮಂಜೂರಾಗಿರುವ ಕಾನೂನು ಕಾಲೇಜು ಪ್ರಾರಂಭ ಮಾಡಲು ಬೇಕಾದ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ.
ಹಣಕಾಸು ಸಚಿವರಾದ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯ ಮುನ್ನೋಟದ ಬಜೆಟ್ ಮಂಡಿಸಿದ್ದು, ಈ ಬಜೆಟ್ ನಲ್ಲಿ ಹೊರ ತೆರಿಗೆ ಹಾಕಿಲ್ಲ. ಬೆಲೆ ಏರಿಕೆ ಮಾಡಿಲ್ಲ. ಜನರಿಗೆ ಹೊರೆ ಇಲ್ಲದ ಬಜೆಟ್ ಇದಾಗಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಿಗೆ ಅನುದಾನ ಮೀಸಲಿಡಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಕ್ಕೆ ಇಂಟರ್ ಪ್ರಿಟೇಷನ್ ಸೆಂಟರ್ ಹಾಗೂ ಹೊಸ ಕಾರ್ಯಪಡೆಗೂ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಜೊತೆಗೆ ಗರಗನಹಳ್ಳಿ ಮೊರಾರ್ಜಿ ವಸತಿ ಶಾಲೆ ಸೇರಿದೆ ಎಂದರು. ಈ ಬಜೆಟ್‌ನಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಜೆಟ್‌ನಲ್ಲಿ ಸೇರಿಲ್ಲ. ಬಜೆಟ್ ನ ಬಳಿಕ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.