ಕೃಷಿ ಸಾಲ ಫಲಕಾರಿ ಅನುಷ್ಠಾನಕ್ಕೆ ಒತ್ತು ನೀಡಿ: ಅಧಿಕಾರಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚನೆ

KannadaprabhaNewsNetwork | Published : Oct 1, 2024 1:20 AM

ಸಾರಾಂಶ

ಡಿಎಲ್‌ಆರ್‌ಸಿ ಬ್ಯಾಂಕರ್ ಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕೃಷಿ ಸಾಲಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೃಷಿ ಸಾಲಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪಿಎಂ-ವಿಶ್ವಕರ್ಮ, ಮುದ್ರಾ, ಕೃಷಿ ಯೋಜನೆಗಳು, ವಸತಿ, ಶಿಕ್ಷಣ ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಿಎಲ್‌ಆರ್‌ಸಿ ಬ್ಯಾಂಕರ್ ಸಭೆಯಲ್ಲಿ ಮಾತನಾಡಿದ ಅವರು, ಪಿಎಂ-ವಿಶ್ವಕರ್ಮ ಪ್ರಧಾನ ಮಂತ್ರಿಯವರ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಂಜೂರಾದ ಎಷ್ಟು ಫಲಾನುಭವಿಗಳಿಗೆ ತರಬೇತಿ ಆಗಿದೆ. ಯಾವ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗಿದೆ. ಹಾಗೂ ಬ್ಯಾಂಕುಗಳಲ್ಲಿ ಶೇ.50 ರಷ್ಟು ಅರ್ಜಿಗಳು ತಿರಸ್ಕೃತವಾಗಲು ಕಾರಣ ಏನೆಂದು ಒಂದು ವಾರ ದೊಳಗೆ ಮಾಹಿತಿ ನಿಡಬೇಕು ಎಂದು ಸೂಚನೆ ನೀಡಿದರು.

ಗೋವಿಂದಾಪುರದಲ್ಲಿ ವಸತಿ ಯೋಜನೆಯಡಿ ಕೆನರಾ ಬ್ಯಾಂಕ್, ಎಸ್‌ಬಿಐ ಸೇರಿದಂತೆ ಸಾಲಕ್ಕೆ 390 ಅರ್ಜಿಗಳು ಬಾಕಿ ಇದ್ದು, ಬ್ಯಾಂಕುಗಳು ದಸರಾ ಹಬ್ಬ ದೊಳಗೆ ಅವುಗಳನ್ನು ವಿಲೇ ಮಾಡಬೇಕು. ಆಯುಧ ಪೂಜೆಯಂದು ವಸತಿ ಸಾಲ ಸೌಲಭ್ಯವನ್ನು ವಿತರಣೆ ಮಾಡೋಣ ಎಂದರು.

ಸಂಸದರು, ಬ್ಯಾಂಕುಗಳಲ್ಲಿ ಬಾಕಿ ಇರುವ ಪಿಎಂ-ಸ್ವನಿಧಿ, ಮುದ್ರಾ, ಸ್ಟ್ಯಾಂಡ್ ಅಪ್, ಪಿಎಂಎಫ್‌ಎಂಇ ಯೋಜನೆಯ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಹಾಗೂ ಪಿಎಂ-ಸುರಕ್ಷ ಬಿಮಾ ಯೋಜನೆಯ ಗುರಿಯನ್ನು ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ನೀಡುವಲ್ಲಿ ಫೈನಾನ್ಶಿಯಲ್ ಲಿಟರೆಸಿ ಕ್ಯಾಂಪ್ ನಡೆಸುವಲ್ಲಿ ಬ್ಯಾಂಕುಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರದ ಯೋಜನೆಗಳನ್ನು ರೈತರಿಗೆ ನೀಡುವಾಗ ಬ್ಯಾಂಕುಗಳು ಓಟಿಎಸ್ (ಒನ್ ಟೈಮ್ ಸೆಟ್ಲ್ಮೆಂಟ್) ಮಾಡದಂತೆ ಕ್ರಮ ವಹಿಸಬೇಕು. ರೈತರಿಗೆ, ಫಲಾನುಭವಿಗಳಿಗೆ ತೊಂದರೆ ನೀಡಬಾರದು. ಡಿಸಿಸಿ ಬ್ಯಾಂಕು ಸೊಸೈಟಿಗಳಿಗೆ ಸಮನಾಗಿ ಸಾಲ ವಿತರಣೆ ಮಾಡಬೇಕು. ನಷ್ಟದಲ್ಲಿರುವ ಬ್ಯಾಂಕುಗಳಿಗೆ ಒಂದು ರೀತಿ ಲಾಭದಲ್ಲಿರುವ ಬ್ಯಾಂಕುಗಳಿಗೆ ಮತ್ತೊಂದು ರೀತಿಯಲ್ಲಿ ತಾರತಮ್ಯ ಮಾಡಬಾರದು. ರೈತರಿಗೆ ಎನ್‌ಓಸಿ ನೀಡುವಾಗ ಸಂಗ್ರಹಿಸುವ 100 ರು. ಬಗ್ಗೆ ಪರಿಶೀಲಿಸಬೇಕು. ರೈತರು ತಮ್ಮ ಕೃಷಿ ಸಾಲ ವಿಸ್ತರಣೆ ಮಾಡುವ ವೇಳೆ ಮತ್ತೊಮ್ಮೆ ಅವರಿಂದ ಎಲ್ಲ ದಾಖಲಾತಿಗಳನ್ನು ತೆಗೆದುಕೊಳ್ಳುವುದು ಬೇಡ. ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳಿಗೆ ಶೇ.0 ಬಡ್ಡಿದರದಲ್ಲಿ ಸಾಲ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮುಂಬರುವ ಸೋಮವಾರದಂದು ವಸತಿ ಸಾಲ ಸೇರಿದಂತೆ ಇತರೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು. ಪ್ರತಿ ತಿಂಗಳು 3 ನೇ ಶನಿವಾರದಂದು ಕಾರ್ಯಕ್ರಮ ಆಯೋಜಿಸಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಕಳೆದ ಬಾರಿ ಗೈರಾದ 14 ಬ್ಯಾಂಕುಗಳಿಗೆ ನೋಟಿಸ್ ನೀಡಲಾಗಿತ್ತು. ಬ್ಯಾಂಕುಗಳು ತಮ್ಮ ಸಿಡಿ ರೇಷಿಯೋ ಹೆಚ್ಚಿಸುವಲ್ಲಿ ಶ್ರಮಿಸಬೇಕು. ಕೃಷಿಸಾಲ ಶಿಕ್ಷಣ, ವಸತಿ ಸಾಲ ಸೇರಿದಂತೆ ಒಟ್ಟಾರೆ ಆದ್ಯತಾ ವಲಯಕ್ಕೆ ಹೆಚ್ಚಿನ ಗಮನ ಹರಿಸಬೇಕು. ಕಡಿಮೆ ಪ್ರಗತಿ ಸಾಧಿಸಿರುವ ಬ್ಯಾಂಕುಗಳು ಮುಂದಿನ ತ್ರೈಮಾಸಿಕದೊಳಗೆ ನಿಗದಿತ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉಪ ನಿರ್ದೇಶಕ ಸುರೇಶ್ ಮಾತನಾಡಿ, ಪಿಎಂ ಸ್ವನಿಧಿ ಸಾಲ ಯೋಜನೆಯಡಿ ಮೊದಲ ಹಂತದ ಸಾಲ ರು.10 ಸಾವಿರ ನೀಡುವಲ್ಲಿ ಶೇ.75, ಎರಡನೇ ಹಂತದ ರು.20 ಸಾವಿರ ನೀಡುವಲ್ಲಿ ಶೇ.101 ಮತ್ತು ಮೂರನೇ ಹಂತದ ರು.50 ಸಾವಿರ ನೀಡುವಲ್ಲಿ ಶೇ.158 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಪಿಎಂ-ವಿಶ್ವಕರ್ಮ ಯೋಜನೆಯಡಿ ಒಟ್ಟು 85223 ಅರ್ಜಿಗಳನ್ನು ಸ್ವೀಕರಿಸಿದ್ದು, 65305 ಅರ್ಜಿಗಳನ್ನು ಮೊದಲನೆ ಹಂತದಲ್ಲಿ, 16979 ಗಳನ್ನು ಎರಡನೇ ಹಂತ ದಲ್ಲಿ ಹಾಗೂ ಮೂರನೇ ಹಂತದಲ್ಲಿ 13920 ಅರ್ಜಿಗಳನ್ನು ಶಿಫಾರಸು ಮಾಡಲಾಗಿದೆ. ಬ್ಯಾಂಕುಗಳಲ್ಲಿ 3882 ಅರ್ಜಿಗಳು ಸ್ವೀಕೃತವಾಗಿದ್ದು, 2007 ಮಂಜೂ ರಾಗಿದೆ. 1507 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.

ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಡಿಜಿಎಂ ಆರ್.ದೇವರಾಜ್ ಮಾತನಾಡಿ, ಜಿಲ್ಲೆಯು ಸಿಡಿ ಅನುಪಾತದಲ್ಲಿ ಸುಧಾರಣೆ ಕಂಡಿದೆ. ಶೇ.75.82 ರಿಂದ ಶೇ.80.11 ವರೆಗೆ ಸುಧಾರಣೆ ಆಗಿದೆ. ಕೃಷಿ ಕ್ಷೇತ್ರದಲ್ಲಿ ಈ ಮಾಹೆವರೆಗೆ ಶೇ.31.71, ಎಂಎಸ್‌ಎಂಇ ಶೇ.42.84, ಶಿಕ್ಷಣ ಸಾಲ ಶೇ.13.60 ವಸತಿ ಶೇ.28.77, ಒಟ್ಟಾರೆ ಆದ್ಯತಾ ಮತ್ತು ಆದ್ಯತಾ ರಹಿತ ವಲಯದಲ್ಲಿ ಶೇ.36.96 ಪ್ರಗತಿ ಸಾಧಿಸಿದ್ದು, ವಿಶ್ವಕರ್ಮ, ಕೃಷಿ, ಶಿಕ್ಷಣ ಇತರೆ ಕ್ಷೇತ್ರಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಬ್ಯಾಂಕುಗಳು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.

ಜಿ.ಪಂ ಸಿಇಓ ಎನ್.ಹೇಮಂತ್ ಮಾತನಾಡಿ, ಪಿಎಂ-ವಿಶ್ವಕರ್ಮ ಯೋಜನೆಯಡಿ ಯಾವ ಕಾರಣಕ್ಕಾಗಿ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಬ್ಯಾಕುಗಳು ಕಾರಣ ನೀಡಬೇಕು. ಹಾಗೂ ಅರ್ಜಿ ಅನುಮೋದನೆಯಾದ ಎಷ್ಟು ಫಲಾನುಭವಿಗಳಿಗೆ ತರಬೇತಿ ನಿಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಪಿಎಂಎಫ್‌ಎಂಇ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಲು ಆಸಕ್ತಿ ಇರುವ ಸ್ವಸಹಾಯ ಗುಂಪುಗಳ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಚಂದ್ರಶೇಖರ್ ಸ್ವಾಗತಿಸಿದರು. ಆರ್‌ಬಿಐ ಎಲ್‌ಡಿಓ ವೆಂಕಟರಾಮ್, ನಬಾರ್ಡ್ ಡಿಡಿಎಂ ಶರತ್ ಗೌಡ ಪಿ, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಜರಿದ್ದರು.

Share this article