ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾಡಳಿತ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗಗಳ ಸಹಯೋಗದೊಂದಿಗೆ ಪ್ರಸೂತಿ ತಜ್ಞರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯದ ಸಮಗ್ರ ಅಧ್ಯಯನದ ಕುರಿತು ಒಂದು ದಿನದ ಕಾರ್ಯಾಗಾರ ಆಸ್ಪತ್ರೆಯ ಡಾ. ಟಿ.ಎಂ.ಎ. ಪೈ ಆಡಿಟೋರಿಯಂನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ತಾಯಿ ಹಾಗೂ ಮಕ್ಕಳ ಸಾವುಗಳು ಅತ್ಯಲ್ಪವಿದ್ದು, ಪ್ರತೀ ತಾಯಿ ಹಾಗೂ ಮಗುವಿನ ಸಾವುಗಳನ್ನು ತಡೆಯಲು ಸರ್ವ ಪ್ರಯತ್ನಗಳನ್ನು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮಾಡಬೇಕು. ಹೆರಿಗೆಗಳು ಸ್ವಾಭಾವಿಕವಾಗಿ ನಡೆಯುವುದಕ್ಕೆ ಒತ್ತು ನೀಡಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಸಿಸೇರಿಯನ್ ಮಾಡಬೇಕು ಎಂದು ಹೇಳಿದರು.ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಸಿಸೇರಿಯನ್ ಹೆರಿಗೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ನೈಜ ಅಗತ್ಯಗಳ ಬಗ್ಗೆ ವೈದ್ಯರಿಗೆ ಹೆಚ್ಚು ತಿಳುವಳಿಕೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹಉಪ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ಜಿಲ್ಲೆಯಲ್ಲಿ ಕಸ್ತೂರ್ಬಾ ಸಮೂಹ ಆಸ್ಪತ್ರೆಗಳು ಹಾಗೂ ಸಂಸ್ಥೆಯು ಗ್ರಾಮೀಣ ಆರೋಗ್ಯ ಕೇಂದ್ರಗಳ ಮೂಲಕ ತಾಯಿ ಮಕ್ಕಳ ಮರಣ ಪ್ರಮಾಣ ತಡೆಯಲು ನೀಡುತ್ತಿರುವ ನಿರಂತರ ಸಹಕಾರಗಳ ಬಗ್ಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ - ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರತ್ನ, ಕೆಎಂಸಿ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕರ್ನಾಟಕ ವೈದ್ಯಕೀಯ ಪರಿಷತ್ತಿನ ವೀಕ್ಷಕ ಡಾ. ಪ್ರೇಮಾನಂದ, ಕೆಎಂಸಿ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್, ತಜ್ಞ ವೈದ್ಯರು, ಖಾಸಗಿ, ಸರ್ಕಾರಿ ವೈದ್ಯರು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಕೆಎಂಸಿ ಮಣಿಪಾಲದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ. ಸ್ವಾಗತಿಸಿದರು. ಡಾ. ರಕ್ಷಿತಾ ಆರ್. ಶೆಣೈ ನಿರೂಪಿಸಿದರು. ಸಹ ಪ್ರಾಧ್ಯಾಪಕಿ ಡಾ. ಈಶ್ವರಿ ಕೆ. ವಂದಿಸಿದರು.ಈ ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಆಸ್ಪತ್ರೆಯ 10 ಜನ ತಜ್ಞ ವೈದ್ಯರು, ಹೆರಿಗೆ ಸಮಯದಲ್ಲಿ ಮಹಿಳೆ ಹಾಗೂ ಮಗುವಿನ ಆರೋಗ್ಯದಲ್ಲಾಗಬಹುದಾದ ಕ್ಲಿಷ್ಟಕರ ಸಂದರ್ಭಗಳ ನಿರ್ವಹಣೆ ಹಾಗೂ ಅವರ ಆರೋಗ್ಯ ರಕ್ಷಣೆ, ಸುಧಾರಣೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.