ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯದ ಆಯವ್ಯಯದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಜನರ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಡೀಸಿ ಶಿಲ್ಪಾನಾಗ್ ಮುಖಾಂತರ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಸಲ್ಲಿಸಲಾಯಿತು. ಸಂವಿಧಾನದಲ್ಲಿ ತರಲಾಗಿರುವ 93ನೇ ತಿದ್ದುಪಡಿಯನ್ವಯ ಎಲ್ಲಾ ಉನ್ನತ ಸಂಸ್ಥೆಗಳಲ್ಲಿ ಎಸ್ಸಿ ಮತ್ತು ಎಸ್ಟಿ ವರ್ಗದವರಿಗೆ ಮೀಸಲಾತಿ ಒದಗಿಸಬೇಕು. ಹಾಸ್ಟೆಲ್‌ಗಳಿಗೆ ಪೀಠೋಪಕರಣಗಳು ಮತ್ತು ಪಾಠೋಪಕರಣಗಳು ಸಮರ್ಪಕವಾಗಿ ಪೂರೈಕೆಯಾಗಬೇಕು. ನಿರಂತರ ಪಾಠ ಏರ್ಪಾಡಾಗಬೇಕು. ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುವ ಎಲ್ಲಾ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ಮನವಿ ಮಾಡಿದರು.ರಾಜ್ಯದಲ್ಲಿ ನಾಗರೀಕ ಹಕ್ಕುಗಳ ರಕ್ಷಣೆ ಕಾಯ್ದೆ ಮತ್ತು ದೌರ್ಜನ್ಯ ತಡೆ ಕಾಯ್ದೆಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಅಪರಾಧಗಳ ಪತ್ತೆ ಮತ್ತು ವಿಚಾರಣೆ ಸರಿಯಾಗಿ ನಡೆದು ರಕ್ಷಣೆಯಾಗುವ ಪ್ರಮಾಣ ಸರಿಯಾಗಿ ಆಗುವಂತೆ ನಿಗಾವಹಿಸಲು ಪ್ರತ್ಯೇಕ ಸಮಿತಿ ಸ್ಥಾಪಿಸಬೇಕು.ಎಸ್‌ಸಿ, ಎಸ್‌ಟಿ ಮೀಸಲಾತಿಗೆ ನಿಗದಿಪಡಿಸಿರುವ 2.50 ಲಕ್ಷ ರು.ನ್ನು 10 ಲಕ್ಷಕ್ಕೆ ಏರಿಸಬೇಕು ಎಂದರು. ಆರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡು ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಟಾನಕ್ಕೆ ತಂದು ಹಂಗಾಮಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಕರ್ನಾಟಕ ಸರ್ಕಾರ 2020ರಲ್ಲಿ ಜಾರಿಗೊಳಿಸಿರುವ ರೈತಾಪಿ ಜನ ವಿರೋಧಿ ಭೂ ಸುಧಾರಣ ತಿದ್ದಪಡಿ ಕಾಯ್ದೆ ಎಪಿಎಂಸಿ. ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆ, ಮತ್ತು ಕೆಲಸದ ಅವಧಿ 8 ರಿಂದ 12 ಗಂಟೆಗೆ ಏರಿಸುವ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರದ್ದುಗೊಳಿಸಿ, ಅಧಿಕೃತ ಆದೇಶ ಹೊರಡಿಸಬೇಕು. ಖಾಸಗಿ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು. ಎಸ್ಸಿ, ಎಸ್ಟಿ ಸಮುದಾಯ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಉಚ್ಚ ನ್ಯಾಯಾಲಯ , ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಅನುಸರಿಸುವುದು. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಎಸ್ಸಿ,ಎಸ್ಟಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು. ವಿವಿಧ ವಸತಿ ಯೋಜನೆಯಡಿ ಅರ್ಹ ಬಡ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿ ಸಹಾಯ ಧನವನ್ನು 5 ಲಕ್ಷ ರು.ಗಳಿಗೆ ಹೆಚ್ಚಿಸಬೇಕು.ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಎಸ್ಸಿ,ಎಸ್ಟಿಯವರಿಗೆ ಮೀಸಲಾಗಿರುವ ಡಿ.ಸಿ. ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಬೇಕು. ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಮಿತಿಯನ್ನು ರು.2 ಕೋಟಿಗೆ ಹೆಚ್ಚಿಸಬೇಕು. ಭೂ ಒಡತನ ಯೋಜನೆಯಲ್ಲಿ ಸುಮಾರು ವರ್ಷದಿಂದ ಹಣ ಇರುವುದಿಲ್ಲ ಕೂಡಲೇ ಸರ್ಕಾರ ಹಣವನ್ನು ಮಂಜೂರು ಮಾಡಬೇಕು. ಈ ವೇಳೆ ಜಿಲ್ಲಾ ಸಂಘಟನಾ ಸಂಚಾಲಕಿ ಮಂಜುಳ, ಶಾಂತಮ್ಮ, ಕೆಂಪರಾಜು, ಸೋಮಣ್ಣ, ಕೆಸ್ತೂರು ಬಸವರಾಜು, ಕುದೇರು ನಾಗರಾಜು, ಕಿನಕಹಳ್ಳಿ ಕೆಂಪಮ್ಮ, ಮಹದೇವಿ, ಮಂಗಳ, ಕಟ್ನವಾಡಿ ಗೀತಾ, ಅಂಬಳೆ ಪ್ರಕಾಶ್, ಶ್ರೀನಿವಾಸ್ ಹಾಜರಿದ್ದರು.