ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ನಿತ್ಯ ಕನ್ನಡ ಭಾಷೆಯನ್ನು ಬಳಕೆ ಮಾಡದಿದ್ದರೆ ಅದು ನಶಿಸಿಹೋಗುವದರಲ್ಲಿ ಸಂದೇಹವಿಲ್ಲ. ಅದಕ್ಕಾಗಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಪಪ್ಪಾ-ಮಮ್ಮಿ ಎಂದು ಕರೆಯದೇ ಅಪ್ಪ-ಅಮ್ಮ ಎಂದು ಕರೆಯುವ ಮೂಲಕ ಮನೆಯಿಂದಲೇ ಕನ್ನಡ ಬಳಕೆ ಮಾಡಿ ಎಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಇಂದು ಪ್ರತಿಯೊಬ್ಬ ಮಗು ಪಪ್ಪಾ-ಮಮ್ಮಿ, ಅಂಕಲ್-ಆಂಟಿ, ಬ್ರದರ್, ಕಸೀನ್ ಬ್ರದರ್ ಸೇರಿ ವಿವಿಧ ಶಬ್ದಗಳನ್ನು ಆಂಗ್ಲ ಭಾಷೆಯಲ್ಲಿ ಬಳಕೆ ಹೆಚ್ಚು ಮಾತನಾಡುತ್ತಾರೆ. ಮಕ್ಕಳು ಈ ಆಂಗ್ಲ ಶಬ್ದಗಳ ಬದಲಾಗಿ ಕನ್ನಡದ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಕಾಕಾ-ಚಿಕ್ಕಮ್ಮ, ಅತ್ತೆ, ಅಕ್ಕ-ಅಣ್ಣ, ಮಾಮಾ-ಅತ್ತಿಗೆ ಇಂತಹ ಶಬ್ದಗಳನ್ನು ನಿತ್ಯವೂ ಬಳಕೆ ಮಾಡುವಂತೆ ಹೇಳಿದರು.ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳಲ್ಲಿ ಹೇಳಿರುವಂತೆ ನಾವು ಜೀವ ಇರುವರೆಗೂ ಕನ್ನಡ ಭಾಷೆ ಮಾತನಾಡುವುದನ್ನು ಬಿಡಬಾರದು. ಕನ್ನಡ ಭಾಷೆ ಹೃದಯ ಭಾಷೆ, ಕನ್ನಡಿಗರು ಕನ್ನಡ ಮಾತನಾಡುವುದನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಕನ್ನಡ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದರು.
ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಕೆಜಿಎಸ್ ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ರಾಜನಾಳ ಉಪನ್ಯಾಸ ನೀಡಿದರು. ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ, ಕರವೇ(ಕೃಷ್ಣಗೌಡ ಸ್ವಾಭಿಮಾನ ಬಣ) ಅಧ್ಯಕ್ಷ ಸುನೀಲ ರಾಠೋಡ, ಜಯ ಕರ್ನಾಟಕ ಮುಖಂಡ ರಾಜು ಗೊರಗುಂಡಗಿ, ಕನ್ನಡ ಜನಪದ ಪರಿಷತ್ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿದರು. ತಾಪಂ ಇಒ ಪ್ರಕಾಶ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಗ್ರಾರಂಟಿ ಯೋಜನೆ ತಾಲೂಕಾಧ್ಯಕ್ಷ ಮೆಹಬೂಬ್ ನಾಯ್ಕೋಡಿ ಇದ್ದರು. ಈ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರಷ್ಟು ಅಂಕ ಪಡೆದ ಶ್ರೇಯಾ ವಂದಾಲ, ಜಯಶ್ರೀ ಶಿರಗುಪ್ಪಿ, ಸೌಮ್ಯ ವಂದಾಲರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರು ನಾಡಗೀತೆ, ರೈತಗೀತೆ ಹಾಡಿದರು. ಕ್ಷೇತ್ರಸಮನ್ವಾಧಿಕಾರಿ ಸುನೀಲ ನಾಯಕ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ, ಬಿ.ವಿ.ಚಕ್ರಮನಿ ನಿರೂಪಿಸಿದರು. ಶಿವು ಮಡಿಕೇಶ್ವರ ವಂದಿಸಿದರು.ಕಾರ್ಯಕ್ರಮದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಭಾವಚಿತ್ರದ ಮೆರವಣಿಗೆ ಜರುಗಿತು. ವಿವಿಧ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಎಳೆದವು. ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ವಿವಿಧ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.