ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ನಡೆದ ಕಲಬುರಗಿ, ವಿಜಯಪೂರ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ನಿವೃತ್ತ ಇಪಿಎಸ್- 95 ನೌಕರರ ಸಮ್ಮೇಳನದಲ್ಲಿ ನೌಕರರು ಕೇಂದ್ರದ ವಿರುದ್ಧ ಗುಡುಗಿದ್ದಾರೆ. ತಮ್ಮದೇ ಲಕ್ಷಾಂತರ ಹಣ ಸಂಸ್ಥೆ ಹೊಂದಿದ್ದರೂ ಪಿಂಚಣಿ ನೀಡುವಲ್ಲಿ ಧಾರಾಳಯಾಕಿಲ್ಲ? ಜಿಪುಣತನ ಯಾಕೆಂದು ಕೇಂದ್ರದವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಸಮ್ಮೇಳನಕ್ಕೆಂದು ಕಲಬುರಗಿಗೆ ಆಗಮಿಸಿರುವ ಇಪಿಎಸ್- 95 ಎನ್‌ಎಸಿ ಕಮಿಟಿ ಅಧ್ಯಕ್ಷ ಅಶೋಕ ರಾವುತ್, ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸಿಂಗ್, ರಾಜ್ಯ ಅಧ್ಯಕ್ಷ ಜಿಎಸ್‌ಎಂ ಸ್ವಾಮಿ, ರಮಾಕಾಂತ ನರಗುಂದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭವಿಷ್ಯನಿಧಿ ಸಂಸ್ಥೆಯಲ್ಲಿ ನೌಕರರು ನೀಡಿರುವ ಕೊಡುಗೆ ರೂಪದ ಹಣವೇ ಸಾವಿರಾರು ಕೋಟಿ ರು. ಇದ್ದರೂ ಕೂಡಾ ನೌಕರರು ನಿವೃತ್ತಿ ನಂತರ ಸಾವಿರ ರುಪಾಯಿಯಷ್ಟು ಪಿಂಚಣಿ ನೀಡಿ ಸಾಗ ಹಾಕಲಾಗುತ್ತಿದೆ. ಇದರಿಂದ ನೌಕರರು ಪರದಾಡುವಂತಾಗಿದೆ ಎಂದು ನೌಕರರ ಸಂಕಷ್ಟಗಳನ್ನು ವಿವರಿಸಿ, ಪ್ರಧಾನಿ ಮೋದಿ 2 ಬಾರಿ ಮಾತುಕತೆ ಮಾಡಿದ್ದಾರೆ. ಇಂದಿಗೂ ಪರಿಹಾರ ನೀಡುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿದರು.ದೇಶಾದ್ಯಂತ ಸರಾಸರಿ ಭವಿಷ್ಯನಿಧಿ ಇರುವ ನಿವೃತ್ತ ನೌಕರರಿಗೆ 1117 ರು. ಪಿಂಚಣಿ ಸರಾಸರಿ ನೀಡಲಾಗುತ್ತಿದೆ. ಮಕ್ಕಳಿರುವ ಸಂಸಾರ ನಡೆಯಲು 7,500 ರು. ಬೇಕೆ ಬೇಕು. ಆರೋಗ್ಯ ಸವಲತ್ತುಗಳೊಂದಿಗೆ ಈ ಮೊತ್ತ ನಮಗೆಲ್ಲರಿಗೂ ನೀಡಲೇಬೇಕು ಎಂದು ಅಶೋಕ ರಾವುತ್ ಆಗ್ರಹಿಸಿದರು.
ಇಪಿಎಸ್- 95 ರಾಷ್ಟೀಯ ಆಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸಿಂಗ್ ಮಾತನಾಡಿ,
ಇಪಿಎಸ್ ನಿವೃತ್ತ ನೌಕರರು ನಿಧನರಾಗಿದ್ದಲ್ಲಿ ಅವರ ಪತ್ನಿಯರಿಗೂ ಶೇ.100ರಷ್ಟು ಪಿಂಚಣಿ ನೀಡಬೇಕು. ಎಲ್ಲಾ ಇಪಿಎಸ್- 95 ನೌಕರರಿಗೆ 5000 ರು. ಸದಸ್ಯರಲ್ಲದ ಉದ್ಯೋಗಿಗಳಿಗೂ ನೀಡಬೇಕು ಎಂದು ಅಶೋಕ ರಾವೂತ್, ಸಿಂಗ್ ಆಗ್ರಹಿಸಿದರು.