ಸೋಮರಡ್ಡಿ ಅಳವಂಡಿ
ಕೊಪ್ಪಳಆದೇಶವನ್ನೇ ತಪ್ಪಾಗಿ ಅರ್ಥೈಸಿಕೊಂಡ ಅಧಿಕಾರಿಗಳ ಯಡವಟ್ಟಿನಿಂದ ಕೆಕೆಆರ್‌ಡಿಬಿ ವಿಶೇಷ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿ ಕಳೆದ ಎಂಟು ತಿಂಗಳಿಂದ ವೇತನವಿಲ್ಲದೆ ಪರದಾಡುವಂತೆ ಆಗಿದೆ.
ಈ ಕುರಿತು ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಪತ್ರಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಕೆಆರ್‌ಡಿಬಿಯಿಂದ ಆರಂಭಿಸಿದ ಶಾಲೆಗಳಾಗಿದ್ದು ನಿಮ್ಮ ಹಂತದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಶಿಕ್ಷಕರು ಹಾಗೂ ಸಿಬ್ಬಂದಿ ಅಡಕತ್ತರಿಯಲ್ಲಿ ಸಿಲುಕುವಂತೆ ಆಗಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಕೆಕೆಆರ್‌ಡಿಬಿ ಅನುದಾನ ಬಳಸಿ 12 ವಿಶೇಷ ಪ್ರೌಢಶಾಲೆ ಪ್ರಾರಂಭಿಸಲಾಗಿದೆ. ಅಲ್ಲಿಗೆ ಕೌನ್ಸೆಲಿಂಗ್ ಮೂಲಕ ಶಿಕ್ಷಕರನ್ನು ವರ್ಗಾವಣೆ ಮಾಡಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.
ಕಾರಣವೇನು?ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್‌ಡಿಬಿ ಅನುದಾನಲ್ಲಿ ವಿಶೇಷ ಪ್ರೌಢಶಾಲೆ ಪ್ರಾರಂಭಿಸಿ ಕಟ್ಟಡಕ್ಕೆ ಅನುದಾನ ನೀಡಿ, ಮೂರು ವರ್ಷ ಅತಿಥಿ ಶಿಕ್ಷಕರ ಮೂಲಕ ಶಾಲೆ ನಡೆಸುವಂತೆ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಶಾಲೆ ಪ್ರಾರಂಭವಾದ ಬಳಿಕ ಖಾಲಿ ಹುದ್ದೆ ಸೃಜಿಸಲಾಗಿದೆ. ಈ ಹುದ್ದೆಗೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಜಾಗ ತೋರಿಸಿದ್ದು ಶಿಕ್ಷಕರು ವರ್ಗಾವಣೆ ಬಯಸಿ ಹೋಗಿ, ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ, ವೇತನ ಪಾವತಿಸುವ ಕುರಿತು ಆದೇಶದಲ್ಲಿ ಇಲ್ಲ. ನೂತನ ವಿಶೇಷ ಪ್ರೌಢಶಾಲೆಗಳನ್ನು ಕೇವಲ ಅತಿಥಿ ಶಿಕ್ಷಕರ ಮೂಲಕ ನಡೆಸುವಂತೆ ಆದೇಶದಲ್ಲಿ ಹೇಳಿರುವುದರಿಂದ ಕಾಯಂ ಶಿಕ್ಷಕರ ವೇತನ ಪಾವತಿಗೆ ಅವಕಾಶವಿಲ್ಲ. ಆದರೆ ಇದನ್ನು ಗಮನಿಸದೆ ಶಾಲಾ ಶಿಕ್ಷಣ ಇಲಾಖೆ ವರ್ಗಾವಣೆ ವೇಳೆಯಲ್ಲಿ ಖಾಲಿ ಹುದ್ದೆ ಎಂದು ತೋರಿಸಿ, ವರ್ಗಾವಣೆ ಮಾಡಿದ್ದರಿಂದ ಇದೀಗ ಸಮಸ್ಯೆಯಾಗಿದೆ.ಈ ಸಮಸ್ಯೆ ನಿವಾರಿಸುವಂತೆ ಶಿಕ್ಷಕರು ಜಿಪಂ ಸಿಇಒ ಹಾಗೂ ಡಿಡಿಪಿಐಗೆ ಪತ್ರ ಬರೆದಿದ್ದಾರೆ. ಜಿಪಂ ಸಿಇಒ ಕಲಬುರಗಿ ಅಪರ ಆಯುಕ್ತರಿಗೆ ಪತ್ರ ಬರೆದು, ಶಿಕ್ಷಕರು ಮತ್ತು ಸಿಬ್ಬಂದಿಯ ವೇತನ ಯಾವ ಲೆಕ್ಕಶಿರ್ಷಿಕೆಯಲ್ಲಿ ಪಾವತಿಸಬೇಕು ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಕೇಳಿದ್ದಾರೆ. ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಕೆಕೆಆರ್‌ಡಿಬಿಯಿಂದಲೇ ಪ್ರಾರಂಭಿಸಿರುವ ಶಾಲೆಗಳು ಆಗಿರುವುದರಿಂದ ನಿಮ್ಮ ಹಂತದಲ್ಲಿಯೇ ಸಮಸ್ಯೆ ನೀಗಿಸಿಕೊಳ್ಳಿ ಎಂದಿದ್ದಾರೆ. ಇದರಿಂದ ಈಗ ಕೆಕೆಆರ್‌ಡಿಬಿ ವಿಶೇಷ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿ ವೇತನವಿಲ್ಲದೆ ಪರದಾಡುತ್ತಿದ್ದಾರೆ.ಪ್ರತಿ ತಿಂಗಳು ಬರುವ ವೇತನದಲ್ಲಿ ಬ್ಯಾಂಕ್ ಸಾಲ ತೀರಿಸುವುದು, ಮನೆ ನಡೆಸುವುದು ಸೇರಿದಂತೆ ಮೊದಲಾದ ಕಂತು ಪಾವತಿಸಬೇಕಿದೆ. ಇದೀಗ ತಮ್ಮದಲ್ಲದ ತಪ್ಪಿಗೆ ಶಿಕ್ಷಕರು ಸಂಕಷ್ಟ ಅನುಭವಿಸಿದ್ದಾರೆ.ವರ್ಗಾವಣೆ ಬಯಿಸಿ ಇಲ್ಲಿಗೆ ಬಂದ ನಮಗೆ ಕಳೆದ ಎಂಟು ತಿಂಗಳಿಂದ ವೇತನ ಬಂದಿಲ್ಲ. ಇದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಕೆಕೆಆರ್‌ಡಿಬಿ ಶಾಲೆಗೆ ಬಂದಿದ್ದೇವೆ. ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಮುಖ್ಯಶಿಕ್ಷಕರೊಬ್ಬರು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಕೆಕೆಆರ್‌ಡಿಬಿ ವಿಶೇಷ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಯ ವೇತನ ಯಾವ ಲೆಕ್ಕಶಿರ್ಷಿಕೆಯಲ್ಲಿ ಪಾವತಿಸಬೇಕು ಎಂಬ ಕುರಿತು ತಿಳಿಸುವಂತೆ ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಆಯಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ರತ್ಮಂ ಪಾಂಡೆಯ ಹೇಳಿದ್ದಾರೆ.