ಕನ್ನಡಪ್ರಭ ವಾರ್ತೆ ಮಡಿಕೇರಿಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸುವುದು ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ಎಂದು ಲೋಕಾಯುಕ್ತ ಡಿವೈಎಸ್‌ಪಿ ವಿ.ಕೃಷ್ಣಯ್ಯ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಮಾತನಾಡಿದರು.ಕಾನೂನು ಬದ್ಧವಾಗಿ ಸರ್ಕಾರದ ನಿಯಮಾನುಸಾರ ಕೆಲಸಗಳನ್ನು ಮಾಡಬೇಕು. ಸಾರ್ವಜನಿಕರ ಕೆಲಸ ಆಗದಿರುವುದಕ್ಕೆ ಹಿಂಬರಹ ನೀಡಬೇಕು. ಸಾರ್ವಜನಿಕರಿಂದ ದೂರುಗಳು ಬಂದಾಗ ತಕ್ಷಣವೇ ಸ್ಪಂದಿಸಬೇಕು ಎಂದರು.
ಸಾರ್ವಜನಿಕರು ಮಾಹಿತಿ ಕೇಳಿದಾಗ ಮಾಹಿತಿ ನೀಡುವುದು ಮೊದಲ ಆದ್ಯತೆ ಆಗಬೇಕು. ಮಾಹಿತಿ ನೀಡದೆ ಸತಾಯಿಸುವುದು ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ. ಆದ್ದರಿಂದ ಯಾವುದೇ ಪತ್ರಕ್ಕೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿವರ್ಷ ಆಸ್ತಿದಾಯಕ ಪಟ್ಟಿ ಸಲ್ಲಿಸಬೇಕು. ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ವಿವರದ ನಾಮಫಲಕ ಅಳವಡಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ದಾಖಲಾತಿಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದರು.ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕೆಲವು ‘ಹೋಂ ಸ್ಟೇಗಳಿಗೂ’ ಪರವಾನಗಿ ನೀಡಲಾಗಿದೆ. ಈ ಸಂಬಂಧ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಇದೇ ಸಂದರ್ಭ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಶ್ರೀಮಂತರು ಸಹ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಅರ್ಹ ಬಡವರಿಗೆ ಬಿಪಿಎಲ್ ಪಡಿತರ ಚೀಟಿ ತಲುಪಿಸಬೇಕು ಎಂದು ಸಲಹೆ ನೀಡಿದರು.ಕಂದಾಯ ನಿಗದಿ, ಭೂಮಿಗೆ ಸಂಬಂಧಿಸಿದ ದಾಖಲೆ ಒದಗಿಸುವುದು, ರಸ್ತೆ ನಿರ್ಮಾಣಕ್ಕೆ ಜಾಗ ಬಿಡಿಸುವುದು ಮತ್ತಿತರ ವಿಚಾರಗಳ ಕುರಿತು ಅರ್ಜಿಗಳು ಸಲ್ಲಿಕೆಯಾದವು. ತಹಸೀಲ್ದಾರ್ ಪ್ರವೀಣ್ ಕುಮಾರ್ ಅವರು ಕಂದಾಯ ಇಲಾಖೆ ದೂರುಗಳಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.