ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಆಶ್ರಯದಲ್ಲಿ ಮಿಷನ್ ಶಕ್ತಿ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಹಿಳೆಯರನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ನಮ್ಮ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯಡಿ 2,000 ರು. ಹಣ, ಯುವ ಜನತೆಗೆ ಯುವನಿಧಿ, ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಂತಹ ಯೋಜನೆಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿವೆ. ಇಂತಹ ಕೆಲಸಗಳು ಸರ್ಕಾರದ ಮೂಲಕ ಸಾಧ್ಯವೇ ಎಂಬ ಅನುಮಾನ ಮೊದಲಿತ್ತು, ಆದರೆ ನಮ್ಮ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು.ಮಹಿಳೆ ಎಂದರೆ ಶಕ್ತಿಯ ಸ್ವರೂಪಿ ಎಂಬುದನ್ನು ನಮ್ಮ ಪುರಾಣಗಳು ಮತ್ತು ಇತಿಹಾಸ ಸಾರುತ್ತಾ ಬಂದಿವೆ. ಆದಿಪರಾಶಕ್ತಿ, ಚಾಮುಂಡೇಶ್ವರಿಯಂತಹ ಶಕ್ತಿ ದೇವತೆಗಳನ್ನು ನಾವು ಆರಾಧಿಸುತ್ತೇವೆ. ಮಹಿಳೆಯರಿಗೆ ಗೌರವ ನೀಡುವ ಸಂಸ್ಕೃತಿ ನಮ್ಮ ದೇಶದ್ದು. ಮನೆಯ ದೀಪ ಬೆಳಗುವ ಶಕ್ತಿ ಮಹಿಳೆಯ ಕೈಯಲ್ಲಿದೆ. ಸಂಸಾರದಲ್ಲಿ ಶಾಂತಿ ನೆಲೆಸಲು ಮಹಿಳೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.
ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ಮಹಿಳೆಯರು ಸಾಧನೆ ಮಾಡಲು ಸೌಲಭ್ಯಗಳು, ಹಣವಿದ್ದರೆ ಸಾಲದು. ಆಚಲವಾದ ಇಚ್ಛಾಶಕ್ತಿ ಇರಬೇಕು. ಚಿತ್ರದುರ್ಗ ಇತಿಹಾಸದಲ್ಲಿ ಒನಕೆ ಓಬವ್ವ ಸಾಮಾನ್ಯ ಮಹಿಳೆಯಾಗಿದ್ದರೂ ಅಸಾಮಾನ್ಯ ಇಚ್ಛಾಶಕ್ತಿಯಿಂದ ಇತಿಹಾಸ ನಿರ್ಮಿಸಿದರು ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಜಿಲ್ಲೆಯ ಶೇ.100ರಷ್ಟು ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳ ಲಾಭ ತಲುಪುತ್ತಿರುವುದು ಸಂತಸದ ವಿಷಯ. ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬ ಬಡವರಿಗೂ ತಲುಪಿಸುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಶ್ಘಾಘನೀಯ ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ, ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.