ಬಡವರು, ಭೂಹೀನರು, ರೈತರ ಸಬಲೀಕರಣವೇ ಸಿಎಂ ಗುರಿ

KannadaprabhaNewsNetwork |  
Published : Sep 11, 2026, 03:00 AM IST
10ಕೆಆರ್ ಎಂಎನ್ 2.ಜೆಪಿಜಿರಾಮನಗರದ 27 ನೇ ವಾರ್ಡಿನ ಬಾಯಮ್ಮ ಲೇ ಔಟ್ ನಲ್ಲಿ ಪಾಂಡುರಂಗಸ್ವಾಮಿ ವಿಠಲ ದೇವಾಲಯ ನಿರ್ಮಾಣ ಕಾರ್ಯದ ಸ್ಥಳವನ್ನು ಶಾಸಕ ಇಕ್ಬಾಲ್ ಹುಸೇನ್  ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಡಿಕೆಶಿ ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಬಡವರು, ಭೂ ಹೀನರು ಹಾಗೂ ರೈತರ ಸಬಲೀಕರಣಕ್ಕಾಗಿ ಘೋಷಿಸಿರುವ ಮಹತ್ವದ ಯೋಜನೆಗಳೇ ಮುಖ್ಯಮಂತ್ರಿ ಜನಪರ ವ್ಯಕ್ತಿ ಎಂಬುದಕ್ಕೆ ಸಾಕ್ಷಿ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು

ರಾಮನಗರ: ಡಿಕೆಶಿ ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಬಡವರು, ಭೂ ಹೀನರು ಹಾಗೂ ರೈತರ ಸಬಲೀಕರಣಕ್ಕಾಗಿ ಘೋಷಿಸಿರುವ ಮಹತ್ವದ ಯೋಜನೆಗಳೇ ಮುಖ್ಯಮಂತ್ರಿ ಜನಪರ ವ್ಯಕ್ತಿ ಎಂಬುದಕ್ಕೆ ಸಾಕ್ಷಿ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.

ನಗರದ 27ನೇ ವಾರ್ಡಿನಲ್ಲಿ ಪಾಂಡುರಂಗಸ್ವಾಮಿ ವಿಠಲ ದೇವಾಲಯ ನಿರ್ಮಾಣ ಕಾರ್ಯದ ಸ್ಥಳ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ದಿನವೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ ಮುಖ್ಯಮಂತ್ರಿಗಳಿ ಇದೀಗ ಜನಸಾಮಾನ್ಯರು ಮತ್ತು ರೈತರಿಗೆ ನೆರವಾಗುವ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಹೇಳಿದರು.

ರಾಜ್ಯದಾದ್ಯಂತ ನಿವೇಶನ ಮತ್ತು ಜಮೀನು ವಂಚಿತ ಬಡ ಕುಟುಂಬಗಳ ನೆರವಿಗಾಗಿ ನಿವೇಶನ ಹಂಚಿಕೆ, ಕೃಷಿ ವಲಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲು ''''''''ನೇಗಿಲ ಯೋಗಿ'''''''' ಯೋಜನೆ ಘೋಷಿಸಿದ್ದಾರೆ. ಈ ಯೋಜನೆ ಮೂಲಕ ರೈತರ ಹೊಲಗಳಲ್ಲಿ ಸರ್ಕಾರದಿಂದಲೇ ಉಳುಮೆ ಮಾಡಿಸಿಕೊಟ್ಟು ಕೃಷಿ ಚಟುವಟಿಕೆಗಳಿಗೆ ವಿಶೇಷ ಉತ್ತೇಜನ ನೀಡಲಾಗುತ್ತದೆ ಎಂದು ತಿಳಿಸಿದರು.

ಇದಲ್ಲದೆ, ಅನ್ನದಾತರ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ''''''''ತೇಗ ಸಿರಿ'''''''' ಯೋಜನೆಗೆ ಚಾಲನೆ ನೀಡಲಾಗಿದ್ದು, ರೈತರ ಜಮೀನುಗಳು ಮತ್ತು ರಸ್ತೆ ಬದಿಗಳಲ್ಲಿ ಅಧಿಕ ಮೌಲ್ಯದ ತೇಗದ ಮರಗಳನ್ನು ಬೆಳೆಸಲು ಅಗತ್ಯ ಪ್ರೋತ್ಸಾಹ ನೀಡಲಾಗುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಗಳನ್ನು ಸೃಷ್ಟಿಸುವ ಸಲುವಾಗಿ ''''''''ಉದ್ಯೋಗ ನಿಧಿ'''''''' ಎಂಬ ವಿಶೇಷ ಆರ್ಥಿಕ ಪ್ರೋತ್ಸಾಹಕ ಯೋಜನೆಯನ್ನು ಸಹ ಘೋಷಿಸಲಾಗಿದೆ. ಈ ಎಲ್ಲ ಯೋಜನೆಗಳು ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ವೇಗ ನೀಡುವುದಾಗಿದ್ದು, ಇವೆಲ್ಲವು ಡಿಕೆಶಿ ಅವರು ಜನ ಸಾಮಾನ್ಯರ ಮೇಲಿನ‌ ಬದ್ದತೆಯ ಪ್ರಮುಖ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎದುರು ಸಾಕಷ್ಟು ಸವಾಲುಗಳಿವೆ. ಸ್ಥಳೀಯ ಚುನಾವಣೆಗಳು ಸನಿಹದಲ್ಲಿವೆ. ಆ ಸವಾಲುಗಳ ನಡುವೆಯೂ ಜನರಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲ ವರ್ಗದ ಸಮುದಾಯಗಳ ಕಷ್ಟ ಸುಖ ಆಲಿಸಿ, ಅದಕ್ಕೆ ಸಂಬಂಧಿಸಿದ ಎಲ್ಲಾ ಜಿಲ್ಲೆಯ ಶಾಸಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಜಿಲ್ಲೆಯ ಮಗನಿಗೆ ಭಗವಂತ ಮತ್ತಷ್ಟು ಶಕ್ತಿ ನೀಡಲಿ ಎಂದು ಕ್ಷೇತ್ರದ ಜನತೆಯ ಪರವಾಗಿ ಪ್ರಾರ್ಥಿಸುವುದಾಗಿ ತಿಳಿಸಿದರು‌.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ಐಟಿ, ಇಡಿ, ಸಿಬಿಐಗಳನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಎನ್‌ಡಿಎ ಮಿತ್ರ ಕೂಟದವರನ್ನು ಹೊರತು ಪಡಿಸಿ ಉಳಿದವರೆಲ್ಲರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಮಮತಾ ಬ್ಯಾನರ್ಜಿ, ಡಿ.ಕೆ.ಶಿವಕುಮಾರ್ ಮೇಲೂ ದಾಳಿ ಮಾಡಿಸಿದ್ದರು. ನನ್ನ ಮೇಲೂ ಐಟಿ, ಇಡಿ ಸೇರಿ ಎಲ್ಲಾ ರೈಡ್‌ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲರ ಮೇಲೂ ರೈಡ್ ಆಗುತ್ತದೆ. ಭ್ರಷ್ಟಾಚಾರ, ಅತ್ಯಾಚಾರ, ಜೈಲು ಎಲ್ಲವೂ ಬಿಜೆಪಿಯವರಲ್ಲೇ ಇದೆ. ಜೈಲಿಗೆ ಹೋಗಿ ಬಂದವರು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಇಕ್ಬಾಲ್ ಹುಸೇನ್ ಕಿಡಿಕಾರಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ಹಳ್ಳಿಮಾಳ ಪಿಎಸಿಎಂಎಸ್ ಅಧ್ಯಕ್ಷ ಸಿ.ರವಿ, ನಿರ್ದೇಶಕ ಸಂದೀಪ್, ಮುಖಂಡರಾದ ಗುರುಪ್ರಸಾದ್, ಗುರುವೇಗೌಡ, ವಸಂತ, ದೇವಾಲಯ ಭೂ ದಾನಿ ಅಣ್ಣಾಸ್ವಾಮಿರಾವ್ ಖಾಂಡೆ ಸಮಿತಿಯ ಪದಾಧಿಕಾರಿಗಳಾದ ಬಾಬುರಾವ್, ಆನಂದರಾವ್, ವೆಂಕೋಬ್ ರಾವ್, ಮಹದೇವಯ್ಯ ಮತ್ತಿತರರು ಹಾಜರಿದ್ದರು‌.

ಕೋಟ್ ....

ರಾಮನಗರದಲ್ಲಿ ವಿಶೇಷವಾಗಿ ಪಾಂಡುರಂಗ ವಿಠಲ ದೇವಾಲಯ ನಿರ್ಮಾಣಕ್ಕೆ ಸಹಕರಿಸುವ ಜೊತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನ ಸೆಳೆದು ಸರ್ಕಾರದಿಂದಲೂ ಅನುದಾನ ಕೊಡಿಸುತ್ತೇನೆ. ನಗರದಲ್ಲಿ ಯುಐಡಿಎಫ್, ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ರಾಮನಗರ ಕ್ಷೇತ್ರಕ್ಕೆ ಹೊಸ ರೂಪ ಕೊಡಲಾಗುವುದು.

-ಇಕ್ಬಾಲ್ ಹುಸೇನ್, ಶಾಸಕರು

10ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ 27ನೇ ವಾರ್ಡಿನ ಬಾಯಮ್ಮ ಲೇ ಔಟ್ ನಲ್ಲಿ ಪಾಂಡುರಂಗಸ್ವಾಮಿ ವಿಠಲ ದೇವಾಲಯ ನಿರ್ಮಾಣ ಕಾರ್ಯದ ಸ್ಥಳವನ್ನು ಶಾಸಕ ಇಕ್ಬಾಲ್ ಹುಸೇನ್ ವೀಕ್ಷಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ: ಕೃಷ್ಣ ಜನ್ಮಾಷ್ಟಮಿ ಆಚರಣೆ
ಬಿರುನಾಣಿ ಮರೆನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟ