ಅಶ್ಲೀಲ ಸಿನಿಮಾ, ಸಾಹಿತ್ಯ ನಿಷೇಧ ಕಾನೂನುಗಳ ರೂಪಿಸಿ

KannadaprabhaNewsNetwork |  
Published : Mar 09, 2026, 01:30 AM IST
8ಕೆಡಿವಿಜಿ1-ದಾವಣಗೆರೆಯಲ್ಲಿ ಭಾನುವಾರ ಎಐಎಂಎಸ್ಎಸ್ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷೆ ರಶ್ಮಿ ಮಾತನಾಡಿದರು. | Kannada Prabha

ಸಾರಾಂಶ

ಅಶ್ಲೀಲ ಸಿನಿಮಾ, ಸಾಹಿತ್ಯ, ಜಾಲತಾಣಗಳು, ಮಾದಕ ಮತ್ತು ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿವೆ. ಆಳುವ ಸರ್ಕಾರಗಳು ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಶ್ಲೀಲತೆಗೆ ಕಡಿವಾಣ ಹಾಕಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಹೊಸ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ರಶ್ಮಿ ಒತ್ತಾಯಿಸಿದ್ದಾರೆ.

- ಮಹಿಳಾ ದಿನ ಕಾರ್ಯಕ್ರಮದಲ್ಲಿ ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ರಶ್ಮಿ ಆಗ್ರಹ

- ದೌರ್ಜನ್ಯಗಳ ತಡೆಗೆ ಸ್ತ್ರೀ-ಪುರುಷರು ಒಗ್ಗಟ್ಟು ಮೆರೆಯಬೇಕು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಶ್ಲೀಲ ಸಿನಿಮಾ, ಸಾಹಿತ್ಯ, ಜಾಲತಾಣಗಳು, ಮಾದಕ ಮತ್ತು ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿವೆ. ಆಳುವ ಸರ್ಕಾರಗಳು ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಶ್ಲೀಲತೆಗೆ ಕಡಿವಾಣ ಹಾಕಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಹೊಸ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ರಶ್ಮಿ ಒತ್ತಾಯಿಸಿದರು.

ನಗರದ ಗಡಿಯಾರ ಕಂಬ ಸಮೀಪ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಜಿಲ್ಲಾ ಘಟಕ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮದ್ಯ ಮತ್ತು ಮಾದಕ ವ್ಯಸನಿಗಳನ್ನು ಮಟ್ಟಹಾಕಲು ಅಗತ್ಯ ಕಾನೂನುಗಳನ್ನು ತರಬೇಕು. ದೇಶದ ಮಹಾನ್ ಚೇತನಗಳಾದ ಭಗತ್ ಸಿಂಗ್, ನೇತಾಜಿ ಸುಭಾಶ್ಟಂದ್ರ ಬೋಸ್‌, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಮೇರಿ ಕ್ಯೂರಿಯಂತಹ ಆದರ್ಶ ಹಾಗೂ ವ್ಯಕ್ತಿತ್ವವನ್ನು ಮಕ್ಕಳಿಗೆ ಶಾಲಾ ಹಂತದಲ್ಲೇ ಪರಿಚಯಿಸಬೇಕು. ಪಠ್ಯ ಪುಸ್ತಕಗಳಲ್ಲಿ ಮಹಾನ್ ಚೇತನಗಳ ಜೀವನ ಸಾಧನೆ, ಕೊಡುಗೆ ಪಠ್ಯವಾಗಿಸಬೇಕು ಎಂದು ಆಗ್ರಹಿಸಿದರು.

ಸಮಾಜದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸ್ತ್ರೀ-ಪುರುಷರು ಒಗ್ಗಟ್ಟಾಗಿ ಅನ್ಯಾಯ ಹಾಗೂ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಇಂತಹ ಮಹಿಳಾ ದಿನ ಆಚರಣೆ ನಿಜಕ್ಕೂ ಸಾರ್ಥಕವಾಗುತ್ತವೆ. ಇದು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಮಾ.8 ವಿಶ್ವಾದ್ಯಂತ ಮಹಿಳಾ ದಿನವಾಗಿ ಆಚರಿಸಲ್ಪಡುತ್ತದೆ. ಒಂದು ಐತಿಹಾಸಿಕ ದಿನವನ್ನು ತಮ್ಮ ಸಂಘಟನೆ ಅರ್ಥಪೂರ್ಣ ದಿನವಾಗಿ ದೇಶಾದ್ಯಂತ ವಿಭಿನ್ನ ರೀತಿ ಆಚರಿಸುತ್ತಿದೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಮಹಿಳಾ ದಿನವನ್ನು ಕೇವಲ ಮಹಿಳೆಯರ ವೈಯಕ್ತಿಕ ಕರಕುಶಲತೆ ಹಾಗೂ ಚಾಕಚಕ್ಯತೆ ಹಾಡಿ ಹೊಗಳುವ ದಿನವಾಗಿ ವಿಜೃಂಭಿಸುವ ಕೆಲಸವಾಗುತ್ತಿದೆ. 1909ರಲ್ಲಿ ಅಮೇರಿಕಾದ ನ್ಯೂಯಾರ್ಕಿನಲ್ಲಿ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರು ಮೂಲಸೌಕರ್ಯ, ಸಮಾನ ವೇತನ, ಮತದಾನದ ಹಕ್ಕಿಗಾಗಿ ಅಸಂಖ್ಯಾತ ಹೋರಾಟಗಳನ್ನು ನಡೆಸಿದರು. ಕೊನೆಗೆ 1910ರಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್‌ ಅವರು ಕೊಪೆನ್‌ ಹೇಗಾನ್‌ನಲ್ಲಿ ನಡೆದ 2ನೇ ಮಹಿಳಾ ಸಮ್ಮೇಳನದಲ್ಲಿ ಮಾ.8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿದರು. ಅಂದಿನಿಂದ ಈ ದಿನವು ಹೋರಾಟದ ದಿನವಾಗಿ ಆಚರಿಸಲ್ಪಡುತ್ತಿದೆ ಎಂದು ರಶ್ಮಿ ವಿವರಿಸಿದರು.

ಸಂಘಟನೆಯ ಮುಖಂಡರಾದ ಮಮತಾ, ಲತಾ, ಕವಿತಾ, ಸರಸ್ವತಿ, ನಾಗಜ್ಯೋತಿ, ರಶ್ಮಿ ನಿಟುವಳ್ಳಿ ಇತರರು ಇದ್ದರು. ಇದೇ ವೇಳೆ ರಾಜ್ಯ ವ್ಯಾಪ್ತಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಟಕ್ಕೆ ಸಹಿ ಸಂಗ್ರಹಣೆ ಮೂಲಕ ಸಾರ್ವಜನಿಕರು ಸಾಕ್ಷಿಯಾದರು. ಮಹಿಳಾ ದೌರ್ಜನ್ಯದ ವಿರುದ್ಧ ಸಮರ ಹೂಡಲು ಸಂಘಟನೆ ಹೊರ ತಂದಿರುವ ವಿಶೇಷ ಸಂಚಿಕೆ ಇರುವ ಪುಸ್ತಕಗಳನ್ನು ಇದೇ ವೇಳೆ ಮಾರಾಟ ಮಾಡಲಾಯಿತು.

- - -

(ಬಾಕ್ಸ್‌) * ಸಮಾನತೆ, ಗೌರವ ಇಂದಿಗೂ ಮರೀಚಿಕೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ನೈಜ ಸ್ವಾತಂತ್ರ್ಯ, ಸಮಾನತೆ, ಗೌರವವು ಇಂದಿಗೂ ಮರೀಚಿಕೆಯಾಗಿದೆ. ದಿನನಿತ್ಯ ಮಹಿಳೆಯರು, ಗರ್ಭಾವಸ್ಥೆಯಿಂದ ಹಿಡಿದು ಮಸಣದವರೆಗೂ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಮೇಲಿನ ಅಪರಾಧಗಳ ಸಂಖ್ಯೆ ಮಿತಿ ಮೀರಿದೆ. 3 ತಿಂಗಳ ಹಸುಗೂಸಿನಿಂದ ಹಿಡಿದು ಮುದುಕಿಯರ ಮೇಲೂ ಅತ್ಯಾಚಾರ ಹಾಗೂ ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸ್ತ್ರೀ ಭ್ರೂಣ ಹತ್ಯೆ, ಮರ್ಯಾದೆ ಹತ್ಯೆ, ಆಸಿಡ್ ದಾಳಿ, ಹಾಗೆಯೇ ಸರ್ಕಾರವೇ ಹೇಳುವ ಸಮೀಕ್ಷೆಯಂತೆ ಈಚೆಗಂತೂ ಬಾಲ ಗರ್ಭಿಣಿಯರ ಸಂಖ್ಯೆ ಸಮಾಜವನ್ನು ಆಘಾತಕ್ಕೀಡು ಮಾಡಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸಾಂಸ್ಕೃತಿಕ ಅಧಃಪತನ ಎಂದು ರಶ್ಮಿ ಬೇಸರ ವ್ಯಕ್ತಪಡಿಸಿದರು.

- - -

-8ಕೆಡಿವಿಜಿ1:

ದಾವಣಗೆರೆಯಲ್ಲಿ ಭಾನುವಾರ ಎಐಎಂಎಸ್ಎಸ್ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷೆ ರಶ್ಮಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದ ಪ್ರತಿ ಹೆಜ್ಜೆಯಲ್ಲೂ ಮಹಿಳೆಯೇ ಶಕ್ತಿ
ತಮಿಳು ಕಾಲೋನಿ ಮಕ್ಕಳಿಗೆ ಕನ್ನಡ ಪಾಠ...!