ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ವಕೀಲರ ಸಂಘದ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನದತ್ತ ಸಾಗಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಕ್ಕೊತ್ತಾಯದ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಪುಟ್ಟಸ್ವಾಮಿ, ವಕೀಲರು ದೇಶಾದ್ಯಂತ ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿಕೊಂಡು ಬಂದಿದ್ದು, ವಕೀಲರಿಗೆ ಯಾವುದೇ ಸೂಕ್ತ ಹಾಗೂ ಸಮರ್ಪಕವಾದ ಭದ್ರತೆ ಹಾಗೂ ಕಾನೂನು ಇರುವುದಿಲ್ಲ ಎಂದರು.ಈಗ ಇರುವ ವಕೀಲರ ದೌರ್ಜನ್ಯ ತಡೆ ಕಾಯ್ದೆ ನಾಮ ಮಾತ್ರ ಕಾಯ್ದೆಯಾಗಿದ್ದು, ಈ ಕಾಯ್ದೆಯಿಂದ ವಕೀಲರಿಗೆ ಅಷ್ಟೊಂದು ಭದ್ರತೆಯೂ ಇಲ್ಲ. ಆರೋಪಿಗಳ ವಿರುದ್ಧ ಬಲವಾದ ರೀತಿಯಲ್ಲಿ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಇರುವುದಿಲ್ಲ. ಈಚೆಗೆ ವಕೀಲರೊಬ್ಬರ ಕತ್ತನ್ನು ಕುಯ್ದು ಕೊಲೆ ಮಾಡಿರುವುದು ಹಾಗೂ ಇನ್ನೊಂದು ಕಡೆ ವಕೀಲರ ವಿರುದ್ಧ ಕೊಲೆ ಪ್ರಯತ್ನ ನಡೆದಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದರು.
ತಾವು ವಕೀಲರ ವಿರುದ್ದ ನಡೆಯುವ ದೌರ್ಜನ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸಿ ವಕೀಲರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ರೀತಿಯಲ್ಲಿ ವಕೀಲರ ದೌರ್ಜನ್ಯ ತಡೆ ಕಾಯ್ದೆಗೆಅವಶ್ಯಕವಾದ ತಿದ್ದುಪಡಿಯನ್ನು ತಂದು ರಾಜ್ಯ ಸರ್ಕಾರವು ಈಗಾಗಲೇ ಮಾಡಿರುವ ವಕೀಲರ ಕಾಯಿದೆಯನ್ನು ಸಂಪೂರ್ಣ ಜಾರಿ ಮಾಡಿ, ಅದನ್ನು ಬಲಪಡಿಸಬೇಕೆಂದು ಆಗ್ರಹಿಸಿದರು