ದೇಶಿ ಕ್ರೀಡೆಗಳ ಪ್ರೋತ್ಸಾಹಿಸಿ: ಯೋಗೇಶ್ವರ್‌

KannadaprabhaNewsNetwork |  
Published : Apr 22, 2025, 01:51 AM IST
ಪೋಟೊ೨೧ಸಿಪಿಟಿ೧: ತಾಲೂಕಿನ ಸರಗೂರು ಗ್ರಾಮದಲಿ ಆಯೋಜಿಸಿದ್ದ ಹೊನಲು-ಬೆಳಕಿನ ಕಬ್ಬಡಿ ಪಂದ್ಯಾಯಲ್ಲಿ ಆಟಗಾರರ ಪರಿಚಯ ಮಾಡಿಕೊಂಡ ಶಾಸಕ ಯೋಗೇಶ್ವರ್ ಶುಭಕೋರಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಗೇಮ್‌ಗಳ ಸುಳಿಗೆ ಸಿಲುಕಿರುವ ಯುವ ಸಮೂಹ ದೇಶಿ ಕ್ರೀಡೆಗಳಿಂದ ದೂರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಗೇಮ್‌ಗಳ ಸುಳಿಗೆ ಸಿಲುಕಿರುವ ಯುವ ಸಮೂಹ ದೇಶಿ ಕ್ರೀಡೆಗಳಿಂದ ದೂರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.

ತಾಲೂಕಿನ ಸರಗೂರು ಗ್ರಾಮದಲ್ಲಿ ಬಸವೇಶ್ವರಸ್ವಾಮಿ ಕ್ರೀಡಾ ಬಳಗ ಆಯೋಜಿಸಿದ್ದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕತೆಯ ಭರಾಟೆಯಲ್ಲಿ ದೇಶಿ ಕ್ರೀಡೆಗಳತ್ತ ಯುವ ಸಮೂಹ ಆಸಕ್ತಿ ಕಳೆದುಕೊಳ್ಳುತ್ತಿದೆ. ಈ ಕುರಿತು ನಾವೆಲ್ಲ ಯೋಚಿಸಬೇಕಿದೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕ. ಪ್ರತಿಯೊಬ್ಬರೂ ಒಂದೊಂದು ಕ್ರೀಡೆಯಲ್ಲಿ ತೊಡಗಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹಿಂದಿನ ದಿನಗಳಲ್ಲಿ ಮಕ್ಕಳು ಹಾಗೂ ಯುವಕರು ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋ-ಖೋ, ಚಿನ್ನಿದಾಂಡು, ಗಾಳಿಪಟ, ಅಣ್ಣೆಕಲ್ಲು, ಕುಂಟೆಬಿಲ್ಲೆಗಳನ್ನು ಆಡುತ್ತಾ ತಮ್ಮ ರಜಾ ದಿನಗಳ ಮಜಾ ಅನುಭವಿಸುತ್ತಿದ್ದರು. ಆದರೆ ಇಂದು ಕ್ರಿಕೆಟ್‌, ಹಾಕಿ, ಸೇರಿದಂತೆ ಆನ್‌ಲೈನ್ ಗೇಮ್‌ಗಳಲ್ಲಿ ಮುಳುಗಿ ಹೋಗಿದ್ದು, ಇದು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಪಾಯವನ್ನುಂಟು ಮಾಡಲಿದೆ. ಮತ್ತೆ ಗ್ರಾಮಗಳಲ್ಲಿ ದೇಶೀಯ ಕ್ರೀಡೆಗಳಿಗೆ ಮರುಜೀವ ಕೊಡಬೇಕು. ಗ್ರಾಮೀಣ ಯುವಕರು ದೇಶೀ ಕ್ರೀಡಗಳ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಕಬಡ್ಡಿ ಆಟ ಯುವಜನರ ದೈಹಿಕ ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳಲು ಅನೂಕೂಲಕರ. ಇಂದು ನಮ್ಮ ಕಬಡ್ಡಿ ದೇಶಿ ಕ್ರೀಡೆ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಕ್ರೀಡಾಪಟುಗಳಿಗೆ ಸೋಲು-ಗೆಲುವು ಮುಖ್ಯವಲ್ಲ. ಆಟದಲ್ಲಿ ಪಾಲ್ಗೊಳ್ಳುವುದನ್ನು ಯುವಕರು ಮೈಗೊಡಿಸಿಕೊಳ್ಳುವಂತೆ ಕರೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಂಡಗಳ ಆಟಗಾರರನ್ನು ಪರಿಚಯ ಮಾಡಿಕೊಂಡ ಶಾಸಕರು ಎಲ್ಲರಿಗೂ ಶುಭ ಕೋರಿದರು.

ಈ ವೇಳೆ ಮಾರೇಗೌಡನದೊಡ್ಡಿ ಮಾದೇಶ್, ಪುಟ್ಟಸ್ವಾಮಿ, ಇಗ್ಗಲೂರು ನಾಗೇಶ್, ನೇರಳೂರು ವಿಶ್ವ, ಪಾಪಣ್ಣ, ಹಾರೊಕೊಪ್ಪ ಶಂಕರೇಗೌಡ, ಆರಳಾಳಸಂದ್ರ ಶಿವಪ್ಪ, ಗುಡಿ ಸರಗೂರು ಗ್ರಾಮದ ಜಯರಾಮು, ರಾಮಚಂದ್ರು, ಬಸವೇಶ್ವರ ಕ್ರೀಡಾ ಬಳಗದ ಸಂತೋಷ, ಪಾಪಣ್ಣ, ಚನ್ನೇಗೌಡ, ಉಮೇಶ್, ರಾಮೇಗೌಡ, ಮಧು, ಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ