ಮಹಿಳೆಯರ ಸಾಧನೆ ಗುರುತಿಸಿ ಗೌರವಿಸುವುದರ ಜತೆಗೆ ಅವರ ಸಬಲೀಕರಣಕ್ಕೆ ಸಮಾಜದಲ್ಲಿ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ.
ದೋಟಿಹಾಳದ ರುದ್ರಮುನಿಸ್ವಾಮಿ ಮಠದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಕನ್ನಡಪ್ರಭವಾರ್ತೆ ಕುಷ್ಟಗಿ
ಮಹಿಳೆಯರು ಕುಟುಂಬದ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಮಹಿಳೆಯರ ಸಾಧನೆ ಗುರುತಿಸಿ ಗೌರವಿಸುವುದರ ಜತೆಗೆ ಅವರ ಸಬಲೀಕರಣಕ್ಕೆ ಸಮಾಜದಲ್ಲಿ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ ಎಂದು ಯುವ ಮುಖಂಡ ಲಾಡ್ಲೇಮಷಾಕ ದೋಟಿಹಾಳ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ರುದ್ರಮುನಿಸ್ವಾಮಿ ಮಠದಲ್ಲಿ ಶ್ರೀ ದಯಾನಂದ ಪುರಿ ಕ್ರೀಡೆ, ಸಾಂಸ್ಕೃತಿಕ ಜಾನಪದ ಕಲಾ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಕುಟುಂಬದಲ್ಲಿ ಪ್ರೀತಿ, ಸಹನೆ, ತಾಳ್ಮೆ ಹಾಗೂ ಸಂಸ್ಕಾರಗಳನ್ನು ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ನಮ್ಮ ಪೂರ್ವಜರಿಂದ ಬಂದಿರುವ ಸಂಪ್ರದಾಯ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಉಡಿ ತುಂಬುವಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ಮಹಿಳೆಯರನ್ನು ಒಂದೆಡೆ ಸೇರಿಸಿ ಪರಸ್ಪರ ಪ್ರೀತಿ, ವಿಶ್ವಾಸ, ಆತ್ಮೀಯತೆ ಹಾಗೂ ಸಹೋದರತ್ವದ ಭಾವನೆ ಬೆಳೆಸುತ್ತವೆ. ಇಂತಹ ಕಾರ್ಯಕ್ರಮಗಳಿಂದ ಸಾಮಾಜಿಕ ಬಾಂಧವ್ಯ ಗಟ್ಟಿಗೊಳ್ಳುವುದರ ಜತೆಗೆ ನಮ್ಮ ಸಂಸ್ಕೃತಿಯ ಮಹತ್ವವೂ ಮುಂದಿನ ಪೀಳಿಗೆಗೆ ತಿಳಿಯುತ್ತದೆ. ಮಹಿಳೆಯರಿಗೆ ಗೌರವ ನೀಡುವುದು ಕೇವಲ ಆಚರಣೆಗಳಿಗೆ ಸೀಮಿತವಾಗದೆ ನಿತ್ಯ ಜೀವನದಲ್ಲಿಯೂ ಅವರ ಶ್ರಮ, ಅಭಿಪ್ರಾಯ ಮತ್ತು ಸಾಧನೆಗಳಿಗೆ ಮನ್ನಣೆ ದೊರೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಸಂಪ್ರದಾಯಬದ್ಧವಾಗಿ ಪಾಲ್ಗೊಂಡು ಪರಸ್ಪರ ಉಡಿ ತುಂಬಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ರಾಮನಗೌಡ ಬಿಜ್ಜಲ್, ನಾರಾಯಣಪ್ಪ ಕೊಳ್ಳಿ, ನಾಗರಾಜ ಕಾಳಗಿ, ಶ್ರೀನಿವಾಸ ಕಂಟ್ಲಿ, ಶ್ರೀಕಾಂತ ಕಿರಗಿ, ಗಂಗಾಧರ ಹುಬ್ಬಳ್ಳಿ, ಅಂಬಿಕಾ ಕಾಳಗಿ, ದೀಪಾ ದೋಟಿಹಾಳ, ಶಂಕರಮ್ಮ ಕಾಳಗಿ, ಶೃತಿ ಹುಬ್ಬಳ್ಳಿ, ಪಾರ್ವತಿ ಓದಾ, ಶಂಕ್ರಮ್ಮ ಓದಾ, ಗಾಯಿತ್ರಿ ಕುದರಿಮೋತಿ, ಹಂಪಮ್ಮ ಅಂಕದ್, ಶೋಭಾ ಕಿರಗಿ, ಲಲಿತಾ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.