ದೊಡ್ಡಬಳ್ಳಾಪುರ: ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಯುವಸೌರಭ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಬೆಂ.ಗ್ರಾ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ತಿಳಿಸಿದರು.
ದೊಡ್ಡಬಳ್ಳಾಪುರ ಜವಾಹರ್ ನವೋದಯ ವಿದ್ಯಾಲಯದಲ್ಲಿ ಬೆಂ.ಗ್ರಾ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಸಾಪ ವತಿಯಿಂದ ನಡೆದ ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಪರಂಪರೆಯ ಅರಿವು ಯುವಜನತೆಯಲ್ಲಿರಬೇಕು. ಕಲೆ ಮತ್ತು ಸಾಹಿತ್ಯದ ಆಸಕ್ತಿಯು ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣದಲ್ಲಿ ಸಹಕಾರಿಯಾಗುತ್ತದೆ ಎಂದರು.ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್. ಹೆಗಡೆ ಮಾತನಾಡಿ, ನಮ್ಮ ಕನ್ನಡ ನಾಡು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ . ಇಂತಹ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿಯನ್ನು ಯುವಜನತೆ ನಿರ್ವಹಿಸಬೇಕಾಗಿದೆ ಎಂದರು.
ಯುವ ಸೌರಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಆರ್. ಚಕ್ರವರ್ತಿ ವಹಿಸಿದ್ದರು. ಸಮಾರಂಭದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ತಾ.ಕಸಾಪ ಅಧ್ಯಕ್ಷ ಪಿ. ಗೋವಿಂದರಾಜು, ನವೋದಯ ವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಜೆ.ಪಿ.ಉಪಾಧ್ಯೆ, ಜಾನಪದ ಕಲಾವಿದರಾದ ಶ್ಯಾಕಲದೇವನಪುರ ರಾಮಚಂದ್ರಯ್ಯ, ವಿಜಯಕುಮಾರ್ , ನವೋದಯ ವಿದ್ಯಾಲಯದ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಯುವ ಸೌರಭದಲ್ಲಿ ದೊಡ್ಡಬಳ್ಳಾಪುರ ಹಂಸವೇಣಿ ತಂಡದವರಿಂದ ಸಮೂಹ ನೃತ್ಯ, ದೇವನಹಳ್ಳಿ ಅರುಣ್ ಕುಮಾರ್ ತಂಡದವರಿಂದ ಸುಗಮಸಂಗೀತ, ಅರದೇಶನಹಳ್ಳಿ ಅಂಜಲಿ ತಂಡದವರಿಂದ ವಚನಗಾಯನ, ಟಿ.ಅಗ್ರಹಾರ ದೀಪಿಕಾ ತಂಡದವರಿಂದ ಸಾಮಾಜಿಕ ನಾಟಕ ಪ್ರದರ್ಶನ, ಹೊಸಕೋಟೆ ನವೀನ್ ತಂಡದವರಿಂದ ತಮಟೆ ಮತ್ತು ದೇವನಹಳ್ಳಿ ಮಧು ತಂಡದವರಿಂದ ನಗಾರಿ ವಾದ್ಯಗಳ ಕಾರ್ಯಕ್ರಮಗಳು ನಡೆದವು.
(ಫೋಟೋ ಕ್ಯಾಫ್ಷನ್) ದೊಡ್ಡಬಳ್ಳಾಪುರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಬೆಂ.ಗ್ರಾ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಸಾಪ ಸಹಯೋಗದಲ್ಲಿ ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.