ಕನ್ನಡಪ್ರಭ ವಾರ್ತೆ ಮದ್ದೂರು
ಒತ್ತುವರಿ ತೆರವುಗೊಳಿಸುವ ವೇಳೆ ಕಟ್ಟಡಗಳ ಮತ್ತು ಅಂಗಡಿಗಳ ಮಾಲೀಕರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗೆ ಇಳಿದು ರಂಪಾಟ ನಡೆಸಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಮಧ್ಯಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಪುರಸಭೆಯ 21ನೇ ವಾರ್ಡ್ ಗೆ ಸೇರಿದ ಕೊಪ್ಪ ಸರ್ಕಲ್ ನಲ್ಲಿ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಕೆಲವರು ಅಕ್ರಮವಾಗಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡು ಅಂಗಡಿ- ಮಳಿಗೆ ತೆರೆದು ಬಾಡಿಗೆ ನೀಡಿದ್ದರೆ ಮತ್ತೆ ಕೆಲವರು ಕಿರಾಣಿ, ಕೋಳಿ ಅಂಗಡಿ ಮತ್ತು ಹೋಟೆಲ್‌ಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.ಇದರಿಂದ ಮದ್ದೂರು- ಕೊಪ್ಪ ಮಾರ್ಗದ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣಕ್ಕೆ ಅಡ್ಡಿ ಉಂಟಾಗಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಅಕ್ರಮ ಕಟ್ಟಡ ಮತ್ತು ಅಂಗಡಿಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಮೌಖಿಕವಾಗಿ ಸೂಚನೆ ನೀಡಿದ್ದರೂ ಸಹ ಒತ್ತುವರಿದಾರರು ತೆರವು ಮಾಡದೆ ನಿರ್ಲಕ್ಷ್ಯ ವಹಿಸಿದ್ದರು.
ಶನಿವಾರ ಮುಂಜಾನೆ 7 ಗಂಟೆ ಸುಮಾರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡ ಕೊಪ್ಪ ರಸ್ತೆಯ ಎಡಭಾಗದಲ್ಲಿದ್ದ ಎಸ್.ಎಸ್.ಸ್ಯಾರಿ ಸೆಂಟರ್, ಜಿ.ಬಿ.ಬೇಕರಿ, ಬಲಭಾಗದ ಸಮೃದ್ಧ ಲಾಡ್ಜ್ ನ ಮುಂಭಾಗದ ಶೀಟ್, ಹೋಟೆಲ್, ಕೋಳಿ ಅಂಗಡಿ ಸೇರಿದಂತೆ 4 ಅಕ್ರಮ ಕಟ್ಟಡ ಹಾಗೂ 7 ಪೆಟ್ಟಿಗೆ ಅಂಗಡಿಗಳನ್ನು ಜೆಸಿಪಿ ಯಂತ್ರದ ಸಹಾಯದಿಂದ ನೆಲಸಮಗೊಳಿಸಲಾಯಿತು.
ಆದರೆ, ಶಿವಪುರದ ಕೊಪ್ಪ ಸರ್ಕಲ್ ನಲ್ಲಿ ಎಡ ಮತ್ತು ಬಲಭಾಗದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅಕ್ರಮ ಕಟ್ಟಡ ಮತ್ತು ಅಂಗಡಿಗಳು ಅಡ್ಡಿ ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಸೂಚನೆ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿಯನ್ನು ತೆರವುಗೊಳಿಸಿದರು.