ಗಂಗಾವತಿ:
ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಇರುವ ನೀರಾವರಿ ಇಲಾಖೆ ಆಸ್ತಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ಅಧಿಕಾರಿಗಳು ತೆರವುಗೊಳಿಸಬೇಕೆಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ವಿಧಾನಸಭಾ ಕ್ಷೇತ್ರದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀರಾವರಿ ಇಲಾಖೆ ಸಿಬ್ಬಂದಿಗೆ ವಸತಿ ನೀಡಲು ಹಲವು ವರ್ಷಗಳ ಹಿಂದೆಯೇ ವಡ್ಡರಹಟ್ಟಿ ಕ್ಯಾಂಪನ್ ಏರಿಯಾದಲ್ಲಿ 108 ಎಕರೆ ಜಾಗವನ್ನು ನೀರಾವರಿ ಇಲಾಖೆಗೆ ನೀಡಲಾಗಿದೆ. ಸದ್ಯ ಇಲಾಖೆ ಜಾಗ ಹಾಗೂ ವಸತಿ ನಿಲಯಗಳು ಖಾಸಗಿ ಅವರ ಪಾಲಾಗಿವೆ. ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದೊಡ್ಡ ಪ್ರಮಾಣ ಆಸ್ತಿ ಒತ್ತುವರಿಯಾಗಿದ್ದರೂ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿಲ್ಲ. ಕೂಡಲೇ ಅಧಿಕಾರಿಗಳು ಇಲಾಖೆಯ108 ಎಕರೆ ಜಾಗವನ್ನು ಪೊಲೀಸ್ ಇಲಾಖೆ ಸಹಾಯ ಪಡೆದುಕೊಂಡು ಶೀಘ್ರ ತೆರವುಗೊಳಿಸಿ. ಸರ್ವೇ ಇಲಾಖೆ ಅಧಿಕಾರಿಗಳಿಂದ ಸರ್ವೇ ನಡೆಸಿ, ವಶಕ್ಕೆ ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಜೆಜೆಎಂ ಕಾಮಗಾರಿ ಗ್ರಾಮೀಣ ಭಾಗಗಳಲ್ಲಿ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಯದೆ ಇರುವ ಕಾರಣಕ್ಕೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರು ಸರಿಯಾಗಿ ಪೈಪ್‌ಲೈನ್ ಅಳವಡಿಸಿಲ್ಲ. ರಸ್ತೆ ಡಾಂಬರೀಕರಣ ಮಾಡಿಲ್ಲ. ಅಳವಡಿಕೆ ಮಾಡಿರುವ ಟ್ಯಾಬ್ ಕಿತ್ತು ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಜೆಜೆಎಂ ಕಾಮಗಾರಿ ಇದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಗುತ್ತಿಗೆದಾರರಿಗೆ ಸೂಕ್ತ ರೀತಿಯಲ್ಲಿ ಎಚ್ಚರಿಕೆ ನೀಡಿ, ಕಾಮಗಾರಿ ಮುಗಿಸುವಂತೆ ಹಾಗೂ ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಬೇಕು. ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಸತಿ ನಿಲಯಗಳಿಗೆ ನಿತ್ಯ ನೀರು ಸರಬರಾಜು ಮಾಡಬೇಕು ಎಂದು ಹೇಳಿದರು.ಶಾಲೆಗಳ ಅಭಿವೃದ್ಧಿಗೆ ಮುಂದಾಗಿ:
ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೂ ಸಹ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು. ಶಾಲೆಗಳಿಗೆ ಸುಸಜ್ಜಿತ ಶೌಚಾಲಯ, ಅಡುಗೆ ಕೋಣೆ, ಕೌಂಪೌಂಡ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹಾಗಾಗಿ ಪಿಡಿಒಗಳು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನ ಬಳಿಸಿಕೊಂಡು ಶಾಲೆಗಳ ಕೌಂಪೌಂಡ ನಿರ್ಮಾಣ, ಸುಸಜ್ಜಿತ ಶೌಚಾಲಯ, ಅಡುಗೆ ಮನೆ ಹಾಗೂ ಮೈದಾನ ನಿರ್ಮಿಸಬೇಕು. ಗ್ರಾಮೀಣ ಭಾಗದ ಶಾಲೆಗಳು ಅಭಿವೃದ್ಧಿಯಾದರೆ ಮಾತ್ರ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆಗೆ ಸೆಳೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರಸಕ್ತ ವರ್ಷದಿಂದ ಗ್ರಾಪಂ ಪಿಡಿಒಗಳು ಶಾಲೆಗಳ ಅಭಿವೃದ್ಧಿ ಕೆಲಸಕ್ಕೆ ಮುಂದಾಗಬೇಕು. ಮುಂದಿನ ವರ್ಷಕ್ಕೆ ಗುರಿ ಹಾಕಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಶ್ರಮ ವಹಿಸಬೇಕು ಎಂದು ಹೇಳಿದರು.ನಂತರ ನಾನಾ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ತಾಪಂ ಇಒಗಳಾದ ರಾಮರೆಡ್ಡಿ, ದುಂಡಪ್ಪ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ ಬಾಬು ಹಾಗೂ ನಾನಾ ಇಲಾಖೆ ಅಧಿಕಾರಿಗಳು ಇದ್ದರು.