ಆಶ್ರಯಕ್ಕಾಗಿ ಒತ್ತುವರಿ: 135 ಮನೆ, ಕಟ್ಟಡ ತೆರವಿಗೆ ಆದೇಶ

KannadaprabhaNewsNetwork |  
Published : Feb 13, 2025, 12:46 AM IST
12ಕೆಡಿವಿಜಿ3-ದಾವಣಗೆರೆಯ ಎಸ್ಪಿಎಸ್‌ ನಗರದ 3 ಎಕರೆ ಜಾಗ ತಮ್ಮದೆಂದು ನ್ಯಾಯಾಲಯ ತೀರ್ಪು ನೀಡಿರುವ ಬಗ್ಗೆ ಜಾಗದ ಮಾಲೀಕ ಅರಣಿ ರುದ್ರೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ವಕೀಲ ಸಂತೋಷ ಪಾವಟೆ ಇದ್ದರು. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಆಶ್ರಯ ಯೋಜನೆಗೆ 2002ರಲ್ಲಿ ಒತ್ತುವರಿ ಮಾಡಿಕೊಂಡಿದ್ದ ತಮಗೆ ಸೇರಿದ 3 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಮನೆ, ಕಟ್ಟಡಗಳ ತೆರವಿಗೆ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ ಎಂದು ಜಾಗದ ಮಾಲೀಕ ಅರಣಿ ರುದ್ರೇಶ ಹೇಳಿದ್ದಾರೆ.

- ಕೋರ್ಟ್‌ ತೀರ್ಪು ಹಿನ್ನೆಲೆ ಜಮೀನು ಮಾಲೀಕ ಅರಣಿ ರುದ್ರೇಶ ಮಾಹಿತಿ । - ಅಂದಿನ ಡಿ.ಸಿ.ಯಿಂದ ಕೋರ್ಟ್‌ ಆದೇಶ ಉಲ್ಲಂಘಿಸಿ 3 ಎಕರೆ ಒತ್ತುವರಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಆಶ್ರಯ ಯೋಜನೆಗೆ 2002ರಲ್ಲಿ ಒತ್ತುವರಿ ಮಾಡಿಕೊಂಡಿದ್ದ ತಮಗೆ ಸೇರಿದ 3 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಮನೆ, ಕಟ್ಟಡಗಳ ತೆರವಿಗೆ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ ಎಂದು ಜಾಗದ ಮಾಲೀಕ ಅರಣಿ ರುದ್ರೇಶ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಆಶ್ರಯ ಯೋಜನೆಯಡಿ 2002ರಲ್ಲಿ ತಮಗೆ ಸೇರಿದ 3 ಎಕರೆ ಜಮೀನನ್ನು ಏಕಾಏಕಿ ಒತ್ತುವರಿ ಮಾಡಿಕೊಂಡಿದ್ದರು. ಅಲ್ಲದೇ, ಅಲ್ಲಿ ಮನೆಗಳನ್ನು ನಿರ್ಮಿಸಿದ್ದನ್ನು ಪ್ರಶ್ನಿಸಿ, ತಾವು ಕೋರ್ಟ್‌ ಮೊರೆಹೋಗಿದ್ದೆವು. ಇದೀಗ ನ್ಯಾಯಾಲಯ ತಮಗೆ ಸೇರಿದ 3 ಎಕರೆ ಜಾಗದ ಮನೆ, ಕಟ್ಟಡ ತೆರವಿಗೆ ಆದೇಶ ನೀಡಿದೆ ಎಂದರು.

ಇಲ್ಲಿನ ಎಸ್‌ಪಿಎಸ್‌ ನಗರದಲ್ಲಿ ನಿರ್ಮಾಣವಾದ 136 ಮನೆಗಳು ಇರುವ ರಿ.ಸ. ನಂ.145/ಪಿ3ಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಜಮೀನು ನನಗೆ ಸೇರಿದೆ ಎಂಬುದಕ್ಕೆ ಸಾಕ್ಷ್ಯಾಧಾರ ಸಮೇತ ನ್ಯಾಯಾಲಯದಲ್ಲಿ ಸಾಬೀತಾಯಿತು. ಒತ್ತುವರಿ ಪ್ರಶ್ನಿಸಿ ದಾವಣಗೆರೆ ಸಿವಿಲ್ ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರ ಬಂದಿತ್ತು. ಅದನ್ನು ಪ್ರಶ್ನಿಸಿ ಆಶ್ರಯ ಯೋಜನೆ, ಜಿಲ್ಲಾಡಳಿತ ಹೈಕೋರ್ಟ್ ಮೊರೆಹೋಗಿದ್ದವು. ಹೈಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಂತರ ಪುನಃ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ನಡೆಸಲು ಆದೇಶಿಸಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯವು ಒತ್ತುವರಿ ಮಾಡಿದ್ದ 3 ಎಕರೆ ಜಾಗದಲ್ಲಿನ ಮನೆಗಳನ್ನು 6 ತಿಂಗಳಲ್ಲಿ ತೆರವು ಮಾಡಿ, ಆ ಜಾಗವನ್ನು ಮಾಲೀಕರಿಗೆ ನೀಡಲು ಆದೇಶಿಸಿದೆ. ಅದರ ವಿರುದ್ಧ ಆಶ್ರಯ ಸಮಿತಿ, ಸಂಬಂಧಿಸಿದವರು ನ್ಯಾಯಾಲಯಕ್ಕೆ ಮತ್ತೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ ಎಂದರು.

ಏತನ್ಮಧ್ಯೆ ಮುಂದಿನ ಕ್ರಮಗಳ ಬಗ್ಗೆ ಮಾ.5ರಂದು ನ್ಯಾಯಾಲಯದ ಗಮನಕ್ಕೆ ತರುವಂತೆಯೂ ಆದೇಶ ನೀಡಲಾಗಿದೆ. ತಮಗೆ ಸೇರಿದ 3 ಎಕರೆ ಜಮೀನಿನಲ್ಲಿ ಅನಧಿಕೃತವಾಗಿ ಆಶ್ರಯ ಮನೆ ನಿರ್ಮಿಸಲು ಹೊರಟಾಗಲೇ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ಈ ಎಲ್ಲ ವಿಚಾರ ಗಮನಕ್ಕೆ ತರಲಾಗಿತ್ತು. ಆದರೆ, ಅಂದಿನ ಜಿಲ್ಲಾಧಿಕಾರಿ ಯಾವುದೇ ರೀತಿ ಸ್ಪಂದಿಸದೇ, ಆಶ್ರಯ ಮನೆಗಳ ನಿರ್ಮಾಣ ಆರಂಭಿಸಿದರು. ಆಗ ನಾವು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಮಾಹಿತಿ ನೀಡಿದರು.

ನಾವು ಜಾಗದ ಮಾಲೀಕರಲ್ಲವೆಂದು ನ್ಯಾಯಾಲಯಕ್ಕೆ ಜಿಲ್ಲಾಧಿಕಾರಿ ಅಫಿಡವಿಟ್ ಸಲ್ಲಿಸಿದಾಗ, 3 ಎಕರೆ ಜಾಗದ ಮೇಲಿನ ನಮ್ಮ ಮಾಲೀಕತ್ವವ ಸಾಕ್ಷ್ಯಾಧಾರ ಸಮೇತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಂತೆ, ಅಲ್ಲಿವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಜ್ಞೆ ಮಾಡಿತ್ತು. ಆದರೆ, ಅಂದಿನ ಡಿಸಿ ಹಾಗೆ ಮಾಡದೇ, ಕೋರ್ಟ್‌ ಆದೇಶ ಉಲ್ಲಂಘಿಸಿ, ತಮಗೆ ಸೇರಿದ 3 ಎಕರೆ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿದ್ದರು ಎಂದು ಹೇಳಿದರು.

ಜಾಗದ ಮಾಲೀಕ ಅರಣಿ ರುದ್ರೇಶ ಪರ ವಕೀಲ ಸಂತೋಷ ಪಾವಟೆ ಇದ್ದರು.

- - -

ಬಾಕ್ಸ್‌ * ನ್ಯಾಯಾಲಯ ಆದೇಶ ಬಂದಾಗಿನಿಂದ ಅಂದಿನ ಡಿಸಿ ನ್ಯಾಯಾಲಯಕ್ಕೆ ಕಿಂಚಿತ್ತು ಬೆಲೆ ಕೊಟ್ಟಿಲ್ಲ. 1999ರ ನ.4ರಂದು ರಿ.ಸ.ನಂ.145/1/ಪಿ ಜಮೀನು ನನ್ನ ಹೆಸರಿಗೆ ನೋಂದಣಿಯಾಗಿ, ಖಾತೆಯಾಗಿದೆ. ಇದು ತಹಸೀಲ್ದಾರ್‌ಗೆ ಗೊತ್ತಿದ್ದರೂ ನಮ್ಮನ್ನು ವಂಚಿಸುವ ಉದ್ದೇಶದಿಂದ ಮಾರಾಟ ಮಾಡಿದ್ದ ಹಳೇ ಮಾಲೀಕರಿಂದ 2001ರ ಅ.8ರಂದು ಸುಳ್ಳು ಒಪ್ಪಿಗೆ ಪತ್ರ ಪಡೆದು, ಖೊಟ್ಟಿ ದಾಖಲೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಆಶ್ರಯ ಮನೆ ನಿರ್ಮಿಸಿದ್ದರು. ಈ ಪ್ರಕರಣದಲ್ಲಿ ಕಡೆಗೂ ನ್ಯಾಯಾಲಯ ತಮ್ಮ ಪರವಾಗಿಯೇ ತೀರ್ಪು ನೀಡಿದೆ ಎಂದು ರುದ್ರೇಶ ತಿಳಿಸಿದರು.

- - -

-12ಕೆಡಿವಿಜಿ3.ಜೆಪಿಜಿ:

ದಾವಣಗೆರೆಯ ಎಸ್ಪಿಎಸ್‌ ನಗರದ 3 ಎಕರೆ ಜಾಗ ತಮ್ಮದೆಂದು ನ್ಯಾಯಾಲಯ ತೀರ್ಪು ನೀಡಿರುವ ಬಗ್ಗೆ ಜಾಗದ ಮಾಲೀಕ ಅರಣಿ ರುದ್ರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಕೀಲ ಸಂತೋಷ ಪಾವಟೆ ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ