ಪರಿಸರ ಅಧ್ಯಯನಕಾರರ ಆತಂಕ । ಗುಡವಿಯ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆ ಬಾಳುವ ಪಾರಂಪರಿಕ ವೃಕ್ಷಗಳ ಕಡಿದು ನಾಶ ಆರೋಪ
ಕನ್ನಡಪ್ರಭ ವಾರ್ತೆ ಸೊರಬ
ಅರಣ್ಯ ಭೂಮಿ ವಾಣಿಜ್ಯ ಬೆಳೆಗಾಗಿ ಪರಿವರ್ತನೆ ಹೊಂದುತ್ತಿರುವ ಕಾರಣ ಮತ್ತು ಯಥೇಚ್ಛವಾಗಿ ಲಭ್ಯವಿರುವ ಕಾನನ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಸಂಪೂರ್ಣ ನಾಶವಾಗುವ ಮತ್ತು ನೀರಿನ ಅಭಾವದ ಜತೆಗೆ ಆಹಾರ ಬೆಳೆಗಳಿಗೆ ಧಕ್ಕೆಯಾಗಿರುವುದು ಪರಿಸರ ತಜ್ಞರ, ಅಧ್ಯಯನಕಾರರ ಆತಂಕಕ್ಕೆ ಕಾರಣವಾಗಿದೆ.ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಚಂದ್ರಗುತ್ತಿ ಹೋಬಳಿಯ ಹೊಳೆಮರೂರು, ತೋರಣಗೊಂಡನಕೊಪ್ಪ, ಅಂದವಳ್ಳಿ, ಮುಟಗುಪ್ಪೆ, ಗೊಗ್ಗೆಹಳ್ಳಿ, ಹರಳಿಗೆ, ಕೋಡಂಬಿ ಇನ್ನೂ ಅನೇಕ ಕಡೆ ಕಾಡುಗಳ್ಳರಿಂದಾಗಿ ಅರಣ್ಯ ನಾಶವಾದ ಬಳಿಕ ಕಸಬಾ ಹೋಬಳಿ, ಗುಡವಿ ಗ್ರಾಪಂ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದ ಸ.ನಂ. ೮ರ ನಿತ್ಯ ಹರಿದ್ವರ್ಣದ ಸಮೃದ್ಧ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆ ಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿದು ನಾಶಪಡಿಸಲಾಗಿದೆ ಎನ್ನುವ ದೂರುಗಳ ಕೇಳಿ ಬಂದಿವೆ.
ಕಂತನಹಳ್ಳಿ ಸ.ನಂ.೮ರಲ್ಲಿ ಒಟ್ಟು ೫೩೩ ಎಕರೆ ಅರಣ್ಯವಿದೆ. ಇದಕ್ಕೆ ತಾಗಿಕೊಂಡು ಸಾರೆಮರೂರು ಗ್ರಾಮದ ಸ.ನಂ.೨೭ರಲ್ಲಿ ೩೫೨ ಎಕರೆ ಅರಣ್ಯವಿದೆ. ಪ್ರಸ್ತುತ ಈ ಸ.ನಂ.ಗೆ ತಾಗಿಕೊಂಡು ಕೆಲ ಖಾಸಗಿ ಅಸ್ತಿಯೂ ಇದೆ. ಇದೇ ಸನಂನಲ್ಲಿ ಸುಮಾರು ೧೫ ಎಕರೆ ಅತಿಕ್ರಮಣವೂ ಆಗಿದೆ.
ಈಗಾಗಲೇ ಕೊಡಲಿ ಏಟು ನೀಡಿ ಧರೆಗುರುಳಿಸಲು ಸಜ್ಜಗೊಂಡಿರುವ ಕಂತನಹಳ್ಳಿ ಸುತ್ತುಮುತ್ತಲಿನ ಕಾಡಿನ ೮೦ಕ್ಕೂ ಹೆಚ್ಚು ಮರಗಳು ಐದಾರು ಎಕರೆ ವಿಸ್ತೀರ್ಣದಲ್ಲಿದ್ದು ಬೆಲೆಬಾಳುವ ಪಾರಂಪರಿಕ ಮರಗಳಾಗಿವೆ. ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಮುಂತಾದ ಜಾತಿಯವದ್ದಾಗಿದೆ. ಈ ಮರಗಳ ಕಡಿತಲೆ ವೇಳೆ ಸಾವಿರಾರು ಸಸ್ಯಗಳು ನಾಶಗೊಂಡಿವೆ ಎನ್ನಲಾಗಿದೆ.
ತಾಲೂಕಿನ ಕಂತನಹಳ್ಳಿ ಗ್ರಾಮದ ಬಳಿ ನಡೆದಿದೆ ಎನ್ನಲಾದ ೧೫ ಎಕರೆ ಅತಿಕ್ರಮಣಕ್ಕೆ ಗ್ರಾಮದ ಪುಟ್ಟರಾಜು, ಕೃಷ್ಣಮೂರ್ತಿ, ಅನಿಲ್‌ಕುಮಾರ್ ಅವರ ವಿರುದ್ಧ ದೂರು ದಾಖಲಾಗಿದೆ. ಕಾಡು ಕಡಿಯಲು ಬಳಸಿದ ಮೆಷಿನ್ ಸೇರಿದಂತೆ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಬ್ರಿಟಿಷ್ ಅಧಿಕಾರಿಗಳಿಂದ ಪ್ರಶಂಸೆ ಪಡೆದ ಸೊರಬ ತಾಲೂಕಿನ ೧೧೪ ಕಾನನಗಳಲ್ಲಿ ಪ್ರಸ್ತುತ ೧೪ ಕಾನನಗಳೂ ಪೂರ್ಣಪ್ರಮಾಣದಲ್ಲಿ ಉಳಿದಿಲ್ಲ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೊಸದಾಗಿ ಅರಣ್ಯ ಒತ್ತುವರಿ ಮಾಡಿ ಕಾಡು ನಾಶ ಮಾಡಬೇಡಿ ಎಂದು ಸೂಚಿಸುತ್ತಿದ್ದರೂ ಈಚೆಗೆ ಅವ್ಯಾಹತ ಕಾಡು ನಾಶವಾಗುತ್ತಿರುವುದು ಆತಂಕಕಾರಿ ಸಂಗತಿ.