ಖಾಸಗಿ ವ್ಯಕ್ತಿಗಳಿಂದ ಸಾರ್ವಜನಿಕರ ಜಾಗ ಅತಿಕ್ರಮಣ: ದಲಿತ ಸಂಘಟನೆಗಳ ಆರೋಪ

KannadaprabhaNewsNetwork |  
Published : Nov 06, 2024, 11:57 PM IST
ಕೆ ಕೆ ಪಿ ಸುದ್ದಿ 01ಸಾರ್ವಜನಿಕರ ಬಳಕೆಯ ಮೀಸಲು ಜಾಗ ಅತಿಕ್ರಮದ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆ.  | Kannada Prabha

ಸಾರಾಂಶ

ಈ ಜಾಗವು ಶಿವನಹಳ್ಳಿ ಪಂಚಾಯ್ತಿಗೆ ಸೇರಿದ್ದು, ದಾಖಲೆಯಲ್ಲಿ ಸರ್ಕಾರಿ ಸ್ವತ್ತು ಎಂದು ಸ್ಪಷ್ಟವಾಗಿದೆ. ಈಗ ಖಾಸಗಿ ಸ್ವತ್ತು ಹೇಗಾಯಿತು? ಮೂಲ ದಾಖಲೆ ನೋಡದೆ ಹೇಗೆ ತಿದ್ದುಪಡಿ ಮಾಡಿರುತ್ತಾರೆ? ದಲಿತರನ್ನು ಓಟಿಗಾಗಿ ಮಾತ್ರ ಬಳಸದೇ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕನಕಪುರ

ನಗರದ ಅಂಬೇಡ್ಕರ್ ನಗರ ಬಡಾವಣೆಯ ಸಾರ್ವಜನಿಕ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿ ಗೋಡೆ ನಿರ್ಮಿಸುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ನಿವಾಸಿ ಹಾಗೂ ಯುವ ಮುಖಂಡ ಶೇಖರ್ ಮಾತನಾಡಿ, ನಾವು ಇದೆ ಬಡಾವಣೆಯಲ್ಲಿ ಹುಟ್ಟಿ, ಬೆಳೆದು, ಆಟವಾಡಿದ ಜಾಗವಿದು. ಯಾರೋ ಖಾಸಗಿ ವ್ಯಕ್ತಿ ಬಂದು ಈಗ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ನಕಲಿ ದಾಖಲೆ ಸೃಷ್ಟಿಸಿ ಈ ರೀತಿ ಮಾಡುತ್ತಿದ್ದಾರೆ, ದಲಿತರ ಭೂಮಿಗೆ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ರಕ್ಷಣೆ ಇಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು,

ಅಂಬೇಡ್ಕರ್ ನಗರ ನಿವಾಸಿ ವಿಜಯ್ ಕುಮಾರ್ ಮಾತನಾಡಿ, ದೀಪಾವಳಿಯ ರಜೆಯಲ್ಲಿ ಯಾರೂ ಇರುವುದಿಲ್ಲ ಎಂದು ತಿಳಿದು ಕಾಂಪೌಂಡ್ ನಿರ್ಮಾಣ ಮಾಡಲು ಸುಮಾರು ಮೂವತ್ತು ವರ್ಷಗಳ ಹಳೆಯ ಅರಳಿಮರವನ್ನು ಖಾಸಗಿ ವ್ಯಕ್ತಿಗಳು ಕಡಿದು ಹಾಕಿದ್ದಾರೆ. ಸ್ಥಳೀಯ ಶಾಸಕರು ಮಧ್ಯ ಪ್ರವೇಶಿಸಿ ದಲಿತರ ಭೂಮಿಯನ್ನು ದಲಿತರಿಗೆ ಉಳಿಸಿ ಕೊಡಿ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ಕುಮಾರ್ ಮಾತನಾಡಿ, ಈ ಜಾಗವು ಶಿವನಹಳ್ಳಿ ಪಂಚಾಯ್ತಿಗೆ ಸೇರಿದ್ದು, ದಾಖಲೆಯಲ್ಲಿ ಸರ್ಕಾರಿ ಸ್ವತ್ತು ಎಂದು ಸ್ಪಷ್ಟವಾಗಿದೆ. ಈಗ ಖಾಸಗಿ ಸ್ವತ್ತು ಹೇಗಾಯಿತು? ಮೂಲ ದಾಖಲೆ ನೋಡದೆ ಹೇಗೆ ತಿದ್ದುಪಡಿ ಮಾಡಿರುತ್ತಾರೆ? ದಲಿತರನ್ನು ಓಟಿಗಾಗಿ ಮಾತ್ರ ಬಳಸದೇ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದರು.

ದಲಿತ ಹೋರಾಟಗಾರ ಗೋಪಿ ಮಾತನಾಡಿ, ಈ ಸ್ವತ್ತು ಸರ್ಕಾರದ್ದಾಗಿದ್ದು, ಈಗ ಜಾಗವನ್ನು ನಾವು ಹರಾಜಿನಲ್ಲಿ ಪಡೆದಿರುವುದಾಗಿ ಖಾಸಗಿ ವ್ಯಕ್ತಿಗಳು ಹೇಳುತ್ತಿದ್ದಾರೆ, ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಈಗಾಗಲೇ ದೂರು ದಾಖಲಿಸಿದ್ದೇವೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಬಿ.ವಿ.ಎಸ್ ಮುಖಂಡ ನವೀನ್ ಕುಮಾರ್ ಮಾತನಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ನಗರಸಭಾ ಆಯುಕ್ತ ಎಂ. ಎಸ್. ಮಹಾದೇವ್, ದಲಿತರಿಗೆ ಸೇರಿದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಈಗಾಗಲೇ ಖಾಸಗಿ ವ್ಯಕ್ತಿಗಳಿಗೆ ಸೂಚನೆ ನೀಡಿದ್ದು, ಜಾಗಕ್ಕೆ ಸಂಬಂಧಿಸಿದಂತೆ ಅವರ ಬಳಿಯಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ತಿಳಿಸಲಾಗಿದೆ, ಸ್ಥಳೀಯ ನಿವಾಸಿಗಳು ಹಾಗೂ ದಲಿತ ಮುಖಂಡರು ನೀಡಿರುವ ಮನವಿ ಸ್ವೀಕರಿಸಿದ್ದು, ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ