ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದ ರೈಲ್ವೆ ಸೇತುವೆ ಅಕ್ಕಪಕ್ಕದ ಇಲಾಖೆಯ ಆಸ್ತಿಗೆ ಹದ್ದುಬಸ್ತು ಮಾಡುವ ಸಲುವಾಗಿ ಇಂದು ಲೋಕೋಪಯೋಗಿ ಇಲಾಖೆಯವರು ಪೊಲೀಸರ ಸಹಕಾರದಲ್ಲಿ ಸರ್ವೇ ನಂ. ೨೨೯/೨ರಲ್ಲಿ ಸರ್ವೇ ಕಾರ್ಯಚರಣೆ ನಡೆಸಿ ಒತ್ತುವರಿಯಾಗಿದ್ದ ಖಾಸಗಿ ಜಮೀನುಗಳಲ್ಲಿ ಗಡಿಕಲ್ಲನ್ನು ನೆಟ್ಟರು.ತಹಸೀಲ್ದಾರ್ ಹಾಗೂ ಎಡಿಎಲ್ ಆರ್ ನೇತೃತ್ವದಲ್ಲಿ ಕಳೆದ ಎರಡು ದಿನದಿಂದ ಸರ್ವೇ ಮಾಡಿದ್ದ ಲೋಕೋಪಯೋಗಿ ಅಧಿಕಾರಿಗಳು ಇಂದು ಪೊಲೀಸರ ಸಹಕಾರದೊಂದಿಗೆ ಒತ್ತುವರಿ ಮಾಡಿದ್ದ ಖಾಸಗಿ ಜಮೀನನಲ್ಲಿ ಗಡಿ ನಿರ್ಧರಿಸುವ ಕಲ್ಲನ್ನು ನೆಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ನಿರ್ವಾಹಕ ರಾಮಮೂರ್ತಿ, ಈ ಸರ್ವೇ ನಂಬರ್ ನಲ್ಲಿ ಇಲಾಖೆಗೆ ಸೇರಿದ್ದ ೧೬ ಎಕರೆ ೧೩ ಗುಂಟೆ ಜಮೀನಿದ್ದು, ಯಾವುದಕ್ಕೂ ೧೯೭೨ರಿಂದ ಬಂದೋಬಸ್ತು ಮಾಡದ ಕಾರಣ ಒತ್ತುವರಿ ಹೆಚ್ಚಾಗಿದೆ. ಈ ಸಂಬಂಧ ಆಳತೆ ಮಾಡಿಕೊಡುವಂತೆ ಎ.ಡಿ.ಎಲ್.ಆರ್ ಗೆ ಸಲ್ಲಿಸಿದ ಮನವಿ ಮೇರಗೆ ಆಳತೆ ಮಾಡಿಕೊಟ್ಟಿದ್ದು, ಅವರು ನೀಡಿರುವ ನಕ್ಷೆಯ ಜಾಗವನ್ನು ಗುರುತಿಸಲು ಕಲ್ಲನ್ನು ನೆಡುತ್ತಿರುವುದಾಗಿ ತಿಳಿಸಿದರು.ಸರ್ಕಾರಿ ಕಾರ್ಯಾಚರಣೆಯಾಗಿರುವುದರಿಂದ ಯಾರಿಗೂ ನೋಟಿಸ್ ನೀಡುವ ಪ್ರಶ್ನೆ ಬರುವುದಿಲ್ಲ, ಈ ಹಿಂದೆ ಈ ಜಮೀನುದಾರರಿಗೆ ನೀಡಿರುವ ಪ್ರಮಾಣ ಪತ್ರ ತಪ್ಪಾಗಿದ್ದು, ಈಗ ಸರಿಪಡಿಸಲಾಗಿದೆ ಎಂದು ಎ.ಎಲ್.ಡಿ.ಆರ್ ತಿಳಿಸಿದ್ದಾರೆ ಎಂದರು.
ನಿನ್ನೆ ಸರ್ವೇ ಕಾರ್ಯಾಚರಣೆಗೆ ಇಳಿದಿದ್ದ ಅಧಿಕಾರಿಗಳು ಇಂದು ಹೆಚ್ಚು ಪೊಲೀಸರೂಡನೆ ಬಂದಿದ್ದರು. ತಹಸೀಲ್ದಾರ್ ರೂಪ, ಇನ್ಸ್ ಪೆಕ್ಟರ್ ವಸಂತ್ ಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.ಅಧಿಕಾರಿಗಳ ಸರ್ವೇ ಕಾರ್ಯಾಚರಣೆಗೆ ಅದೇ ಪ್ರದೇಶದಲ್ಲಿದ್ದ ಜಮೀನು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳೊಡನೆ ವಾಗ್ವಾದಕ್ಕೆ ಇಳಿದರು. ಆದರೆ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.
ಕಾಂಗ್ರೆಸ್ ಮುಖಂಡರಿಂದಲೇ ಅಕ್ಷೇಪ:ಇದೇ ಸರ್ವೇ ನಂಬರ್ ನಲ್ಲಿ ಲೇ ಔಟ್ ನಿರ್ಮಿಸಿರುವ ಕೆಪಿಸಿಸಿ ಸದಸ್ಯ ಪ್ರದೀಪ್ ರೆಡ್ಡಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತರೆಡ್ಡಿ ಅಧಿಕಾರಿಗಳ ಸರ್ವೇಯನ್ನು ಖಂಡಿಸಿ, ಇದು ಅವೈಜ್ಞಾನಿಕವಾಗಿದ್ದು, ಆಯ್ದ ಜಾಗದಲ್ಲಿ ಮಾತ್ರ ಸರ್ವೇ ಮಾಡಲಾಗುತ್ತಿದೆ. ರೈಲ್ವೆ ಸೇತುವೆಯ ಆ ಭಾಗವು ಇದೇ ಸರ್ವೇ ನಂಬರಿಗೆ ಬರುತ್ತಿದ್ದರೂ ಅಲ್ಲಿಂದ ಗುರ್ತಿಸುವ ಕೆಲಸ ಮಾಡದೆ ಪಶ್ಚಿಮ ಭಾಗದ ಖಾಸಗಿ ಜಮೀನಿಂದ ಅಳತೆ ಮಾಡಲಾಗುತ್ತಿದೆ. ಇದು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.