ಬಾಲಕಾರ್ಮಿಕ ವಿರೋಧಿ ದಿನ । ಕಾನೂನು ಅರಿವು, ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಸೀಕೆರೆಸಮಾಜದ ಪ್ರತಿಯೊಂದು ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪೋಷಕರು ಇವುಗಳ ಸದುಪಯೋಗ ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶೆ ರಶ್ಮಿ ಎಚ್.ಬಿ. ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಸನ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಜಂಟಿಯಾಗಿ ಗುರುವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಾಲಕಾರ್ಮಿಕ ಪದ್ದತಿಯಿಂದ ಮಕ್ಕಳು ಸಣ್ಣ ವಯಸ್ಸಿನಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಡುವ ಶಿಕ್ಷಣದಿಂದ ವಂಚಿತರಾಗುತ್ತಾರೆ. ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ತಿದ್ದುಪಡಿ ಕಾಯ್ದೆ 1986ರ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದ್ದು ಕಾನೂನಿನ ಅರಿವು ಮೂಡಿಸುವ ಅಗತ್ಯತೆ ಇದೆ. ಸಾರ್ವಜನಿಕರು ವಿದ್ಯಾರ್ಥಿಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಅವರನ್ನು ಹತ್ತಿರದ ಶಾಲೆಗೆ ಸೇರಿಸುವ ಕಾರ್ಯ ಮಾಡಬೇಕು. ಸುಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗೂಡಿ ಬಾಲಕಾರ್ಮಿಕ ವಿರೋಧಿ ನೀತಿ ಅನುಸರಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಕುಮಾರ್ ಮಾತನಾಡಿ, ದೇಶದಲ್ಲಿ ಬಾಲಕಾರ್ಮಿಕ ಮತ್ತು ಜೀತ ಪದ್ಧತಿ ಇಂದಿಗೂ ಜೀವಂತವಾಗಿರಲು ಬಡತನ, ಶಿಕ್ಷಣ ಹಾಗೂ ಸಾಮಾಜಿಕ ಭದ್ರತೆ ಕೊರತೆಯೇ ಕಾರಣವಾಗಿದೆ. ಪ್ರತಿಯೊಬ್ಬರೂ ಸುಶಿಕ್ಷಿತರಾಗಿ ಶಿಕ್ಷಣ ಪಡೆದುಕೊಂಡಲ್ಲಿ ಜ್ಞಾನಾರ್ಜನೆ ಜತೆಗೆ ಉತ್ತಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಇದರಿಂದ ಬಾಲಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತದೆ. ಸಂವಿಧಾನವೂ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿದ್ದು 14 ವರ್ಷದೊಳಗಿನ ಮಕ್ಕಳಿಗೆ ಸರ್ಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಅವಕಾಶ ಕೊಟ್ಟಿದೆ ಎಂದು ಹೇಳಿದರು.ಮುಖ್ಯೋಪಾಧ್ಯಾಯ ಎಸ್.ನಟರಾಜ್ ಮಾತನಾಡಿ, ಶಾಲೆಗಳಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಮಕ್ಕಳು ಶಾಲೆಗಳಲ್ಲಿ ಗೈರುಹಾಜರಾಗದಂತೆ ಎಚ್ಚರವಹಿಸಿ ಶಿಕ್ಷಣದತ್ತ ಗಮನಹರಿಸಿದಾಗ ಬಾಲಕಾರ್ಮಿಕ ಪದ್ಧತಿಯಿಂದ ದೂರವಿರಬಹುದು. ಕಿಶೋರಾವಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆದು ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲ ಆರ್.ವಿಜಯ್ ಕುಮಾರ್ ಶಾಲಾ ಮಕ್ಕಳಿಗೆ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಮಿಕ ಇಲಾಖೆ ನಿರೀಕ್ಷಕ ಪರಶುರಾಮ್ ಎಚ್., ವಕೀಲರಾದ ಸಿದ್ದಮಲ್ಲಪ್ಪ, ಕಾವ್ಯಶ್ರೀ ಬಾಯಿ ಹಾಗೂ ನ್ಯಾಯಾಂಗ, ಪೋಲಿಸ್, ಶಿಕ್ಷಣ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.