ಶಿರಾ: ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು ಎಂದು ಕರ್ನಾಟಕ ಮಾದಿಗ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಂಗನಾಥ್ ಹೇಳಿದರು.ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಒಳಮೀಸಲಾತಿ ಅಂಗೀಕರಿಸಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರು ನಿವಾಸದವರೆಗೆ ಭಾನುವಾರದಿಂದ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ವಕೀಲರಾದ ರಂಗಾಧಮಯ್ಯ ಮಾತನಾಡಿ, ಒಳಮೀಸಲಾತಿಗಾಗಿ ಮಾದಿಗ ಸಮುದಾಯ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಈ ದೇಶದಲ್ಲಿ ಅತ್ಯಂತ ಹಿಂದುಳಿದ ಸಮುದಾಯ ಹಾಗೂ ಅತಿ ಹೆಚ್ಚು ಮತಬ್ಯಾಂಕ್ ಹೊಂದಿರುವ ಸಮುದಾಯ ಮಾದಿಗ ಸಮುದಾಯ. ಆದರೂ ಸಹ ಮೀಸಲಾತಿ ಕ್ಷೇತ್ರಗಳಲ್ಲೂ ಸಹ ಗೆಲುವು ಸಾಧಿಸಲು ಸಾಧ್ಯವಾಗುತ್ತಿಲ್ಲ. ಒಳಮೀಸಲಾತಿ ಜಾರಿಯಾದರೆ ಮಾದಿಗ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ದಂಡು ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ಕುಮಾರ್ ಮಾತನಾಡಿ, ಕಳೆದ 30 ವರ್ಷಗಳಿಂದ ಒಳಮೀಸಲಾತಿ ಒತ್ತಾಯಿಸಿ ಬಹುಸಂಖ್ಯಾತ ಮಾದಿಗ ಜನಾಂಗದ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ. ಹಲವು ಪಾದಯಾತ್ರೆಗಳು, ಜಾಥಾಗಳು, ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ಹೀಗೆ ಮೂರು ದಶಕಗಳ ಕಾಲ ನಮ್ಮ ಸಮುದಾಯ ಸುದೀರ್ಘ ಹೋರಾಟ ಮಾಡುತ್ತ ಬಂದಿದೆ ಎಂದರು.ಇದಕ್ಕಾಗಿ ಹಲವರು ತ್ಯಾಗ ಬಲಿದಾನ ಮಾಡಿದ್ದಾರೆ. ಒಳಮೀಸಲಾತಿಯ ಬಗ್ಗೆ ಸುಪ್ರಿಂಕೋರ್ಟ್‍ನ 7 ನ್ಯಾಯಮೂರ್ತಿಗಳ ಪೀಠವು ಸುದೀರ್ಘ ವಿಚಾರಣೆ ನಡೆಸಿ ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ಮಹತ್ತರ ತೀರ್ಪು ನೀಡಿದೆ. ತೀರ್ಪಿನ ಆದೇಶಕ್ಕೆ ಅನುಗುಣವಾಗಿ ಆಯಾ ರಾಜ್ಯ ಸರ್ಕಾರಗಳು ಒಳಮೀಸಲಾತಿ ಅಂಗೀಕರಿಸಬಹುದೆಂದು ತಿಳಿಸಿದೆ ಎಂದರು.
ತೀರ್ಪು ಬಂದ ಒಂದೇ ದಿನದಲ್ಲಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ ದೇಶದಲ್ಲಿಯೇ ಮೊದಲು ನಾವೆ ಅಂಗೀಕರಿಸುವುದಾಗಿ ವಿಧಾನಸಭೆ ಸದನಸಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಬಗ್ಗೆ ಮೌನ ವಹಿಸಿದ್ದಾರೆ ಎಂದರು.ಕಾಲ್ನಡಿಗೆ ಜಾಥಾದಲ್ಲಿ ಸಮಿತಿಯ ಗೌರವಾಧ್ಯಕ್ಷರು. ಕೆ.ಮಂಜುನಾಥ್, ಪ್ರಚಾರ ಸಮಿತಿ ವೀರ ಖ್ಯಾತಯ್ಯ, ಕಾರ್ಯದರ್ಶಿ ನಾಗರಾಜ್.ಎಸ್, ಪಟ್ಟನಾಯಕನಹಳ್ಳಿ ಹನುಮಂತ, ಚಂದ್ರಣ್ಣ, ದಲಿತ ಮುಖಂಡರಾದ ಭರತ್ ಕುಮಾರ್, ಶಿವಕುಮಾರ್, ಮಹಾಲಕ್ಷ್ಮೀ, ನಾಗೇಂದ್ರ, ನಾದೂರು ಕಿರಣ, ರಾಜೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.