ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಎಸ್ಪಿ ಉಮಾ ಪ್ರಶಾಂತ್ ಚಾಲನೆ । ವಿದ್ಯಾರ್ಥಿ, ಯುವಕರು ಟೆನ್ನಿಸ್‌ನಲ್ಲೂ ಸಾಧನೆ ಮಾಡಿ
ಕನ್ನಡಪ್ರಭ ವಾರ್ತೆ ದಾವಣಗೆರೆದೇಶೀ ಕ್ರೀಡೆ, ಕ್ರಿಕೆಟ್, ಫುಟ್ಬಾಲ್ ಜೊತೆಗೆ ಟೆನ್ನಿಸ್ ಕ್ರೀಡೆಯಲ್ಲೂ ದಾವಣಗೆರೆ ಜಿಲ್ಲೆ ಹೆಸರು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಟೆನ್ನಿಸ್ ಕ್ರೀಡೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೊರ ಹೊಮ್ಮಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಕರೆ ನೀಡಿದರು.
ನಗರದ ಹೈಸ್ಕೂಲ್ ಮೈದಾನದ ಟೆನ್ನಿಸ್ ಅಂಕಣದಲ್ಲಿ ಶುಕ್ರವಾರ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್‌ನಿಂದ ಹಮ್ಮಿಕೊಂಡಿದ್ದ 3 ದಿನಗಳ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಗೆ ಆತಿಥ್ಯ ವಹಿಸಿದ್ದ ಜಿಲ್ಲೆ ಮತ್ತೆ ರಾಜ್ಯಮಟ್ಟದ ಪಂದ್ಯಾವಳಿಗೆ ಕಾರಣವಾಗಿದೆ. ಬೆಣ್ಣೆದೋಸೆ, ಖಾರಾ ಮಂಡಕ್ಕಿ, ಮೆಣಸಿನಕಾಯಿಗೆ ಹೆಸರಾಗಿದ್ದ ದಾವಣಗೆರೆ ಟೆನ್ನಿಸ್ ಪಂದ್ಯಾವಳಿಗಳ ಮೂಲಕವೂ ಹೆಸರಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸಾಮಾನ್ಯವಾಗಿ ಹಲವು ಊರು, ಜಿಲ್ಲೆಗಳು ಪಂದ್ಯಾವಳಿಯ ಆತಿಥ್ಯ ವಹಿಸಲು ಕಾತುರವಾಗಿರುತ್ತದೆ. ರಾಜ್ಯಮಟ್ಟದ ಆತಿಥ್ಯ ದಾವಣಗೆರೆ ಸಿಕ್ಕಿದ್ದು ಹೆಮ್ಮೆಪಡುವ ಸಂಗತಿ. ಈ ಜಿಲ್ಲೆಯಿಂದಲೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರ ಹೊಮ್ಮಬೇಕು. ಪ್ರತಿಭೆ ಯಾರದ್ದೇ ಸ್ವತ್ತಲ್ಲ. ಶ್ರದ್ಧೆ, ಪರಿಶ್ರಮ, ಏಕಾಗ್ರತೆಯಿಂದ ಕ್ರೀಡಾಭ್ಯಾಸದಲ್ಲಿ ತೊಡಗಿದರೆ ಸಾಧನೆ ಸಾಧ್ಯ. ಯುವ ಕ್ರೀಡಾಪಟುಗಳಿಗೆ ಜಿಲ್ಲಾ ಅಸೋಸಿಯೇಷನ್ ಪ್ರೋತ್ಸಾಹಿಸುತ್ತಿರುವುದು ಸ್ಫೂರ್ತಿದಾಯಕ ಕಾರ್ಯ ಎಂದು ಶ್ಲಾಘಿಸಿದರು.
ಸ್ಥಳೀಯ ವಿದ್ಯಾರ್ಥಿ, ಯುವ ಜನರು ಅಂತಾರಾಷ್ಟ್ರೀಯ ಮಟ್ಟದ ಟೆನ್ನಿಸ್ ಅಂಕಣಗಳ ಪಡೆದ ಟೆನ್ನಿಸ್‌ನಲ್ಲೂ ಸಾಧನೆ ಮಾಡಬೇಕು. ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಎಸ್ಪಿ ಉಮಾ ಪ್ರಶಾಂತ ಕಿವಿಮಾತು ಹೇಳಿದರು.ಸಂಸ್ಥೆ ಅಧ್ಯಕ್ಷ ಡಾ.ಶ್ರೀಶೈಲ ಬ್ಯಾಡಗಿ ಮಾತನಾಡಿ, ಸಂಸ್ಥೆಯಿಂದ 13ನೇ ಬಾರಿಗೆ ಪಂದ್ಯಾವಳಿ ಆಯೋಜಿಸಿದೆ. ಪ್ರತಿ ವರ್ಷ ಡಿಸೆಂಬರ್ ಮೊದಲ ವಾರ ಟೂರ್ನಿ ಹಮ್ಮಿಕೊಳ್ಳುತ್ತಾ ಬಂದಿದ್ದು, ಪ್ರತಿ ಸಲವೂ 150ರಿಂದ 200 ಸ್ಪರ್ಧಿಗಳು ಭಾಗವಹಿಸುತ್ತಾ ಬಂದಿದ್ದಾರೆ. ಆದರೆ, ಈ ವರ್ಷ ಹಿಂದಿನ ವರ್ಷಗಳಿಗೆ ದುಪ್ಪಟ್ಟು ಅಂದರೆ ಸುಮಾರು 450 ಕ್ರೀಡಾಪಟುಗಳು ಭಾಗವಹಿಸಿದ್ದು, ಸುಮಾರು ನೂರಾರು ಪಂದ್ಯಗಳ ಮೂಲಕ ಸ್ಥಳೀಯ ಟೆನಿಸ್ ಪ್ರಿಯರಿಗೆ ಸ್ಪರ್ಧೆಯ ರಸದೌತಣ ಬಡಿಸಲಿದ್ದಾರೆ ಎಂದರು. ಜಿಲ್ಲಾ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಸಮರ್ಥ ಎಂ.ಶಾಮನೂರು, ಅನಿಲ್ ಇತರರಿದ್ದರು.
ದಾವಣಗೆರೆಯಲ್ಲಿ ವ್ಯವಸ್ಥಿತವಾಗಿ, ಯಾವುದೇ ಗೊಂದಲ ಇಲ್ಲದಂತೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳ ಆಯೋಜಿಸಿದ್ದು ಗಮನಿಸಿ, ಕರ್ನಾಟಕ ರಾಜ್ಯ ಸಂಸ್ಥೆಯಿಂದ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಪಂದ್ಯಾವಳಿಗಳ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಡಾ.ಶ್ರೀಶೈಲ ಬ್ಯಾಡಗಿ, ಸಂಸ್ಥೆ ಅಧ್ಯಕ್ಷ..........