ಕನ್ನಡಪ್ರಭ ವಾರ್ತೆ ಮೈಸೂರು
ಓದುಗರು ಯಾವುದೇ ಕೃತಿ ಓದುವಾಗ ಅದರ ಚಿಂತನೆ, ಆಶಯ ಮನಗಾಣಬೇಕು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ತಿಳಿಸಿದರು.ನಗರದ ಎಂಜಿನಿಯರ್ ಸಂಸ್ಥೆಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ ಮತ್ತು ಭದ್ರಶೆಟ್ಟಿ ಬಳಗ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ವೈದ್ಯ ಲೇಖಕ ಡಾ.ಭ. ನಾಗರಾಜ್ ಅವರ ‘ಟ್ವಿನ್ಸ್’ ಮತ್ತು ‘ಕೆವೋಸ್ ಡೊಂಟ್ ಡೆಸ್ಟ್ರಾಯ್’ ಎಂಬ ಆಂಗ್ಲ ಕಾದಂಬರಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.ಸೃಜನಾತ್ಮಕ ಬರವಣಿಗೆಯು ಆಲೋಚನೆ ಮತ್ತು ಅಭಿವ್ಯಕ್ತಿಗಳನ್ನು ಮೂಡಿಸಲು ಸಹಾಯ ಮಾಡುತ್ತದೆ. ಕೃತಿಕಾರರಲ್ಲಿ ಸೃಜನಾತ್ಮಕ ಬರವಣಿಗೆ ಮುಖ್ಯವಾಗಿದ್ದು, ಸಮಾಜಮುಖಿ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.ಲೇಖಕರು ಆತ್ಮ ಕಥಾನಕ ಕೃತಿಯನ್ನಾಗಿ ರಚಿಸಿದ್ದಾರೆ. ಅನುಭವಕ್ಕೆ ಅಂಟಿಕೊಂಡು ಬರವಣಿಗೆ ಸಾಗುವ ಪ್ರಯತ್ನ ಮಾಡಿರುವುದು ಕಾಣಬಹುದು. ಯಾವುದು ಸೂಕ್ಷ್ಮವೋ ಅದನ್ನು ಸ್ಥೂಲವಾಗಿ ವಿವರಿಸುವ ಕೆಲಸ ಮಾಡಬೇಕು. ಆ ಪ್ರಯತ್ನ ಮಾಡಿದ್ದಾರೆ. ಇದೊಂದು ಅರ್ಥಪೂರ್ಣವಾದ ಸಾಹಿತ್ಯ. ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿರುವುದು ಕನ್ನಡದ ಭಾಗ್ಯ ಎಂದರು.ಯಾವುದೇ ಲೇಖಕರಾದರೂ ತಮ್ಮ ಸಮುದಾಯ ಕೇಂದ್ರಿತ ಬದುಕು ಬಿಂಬಿಸುವ ಪ್ರಯತ್ನಿಸುತ್ತಾರೆ. ತಮ್ಮ ಒಟ್ಟು ಬದುಕು ಚಿತ್ರಿಸುವುದು ವಿಶೇಷ. ಬೇರೆ ಭಾಷೆಯವರಿಗೂ ತಮ್ಮ ಕೃತಿಯ ಆಶಯ ಲಭಿಸಬೇಕು ಎನ್ನುವುದು ಮಾತೃಭಾಷೆಯ ಕೃತಿಕಾರರ ಆಂತರ್ಯದಲ್ಲಿನ ತುಡಿತ ಇರುತ್ತದೆ. ಇದಕ್ಕೆ ಅನುಗುಣವಾಗಿ ಅಪರೂಪದ ಸಾಹಿತಿಗಳ ಸಾಲಿಗೆ ಡಾ.ಭ. ನಾಗರಾಜ್ ಸೇರಿದ್ದಾರೆ ಎಂದು ಅವರು ಶ್ಲಾಘಿಸಿದರು.ಟ್ವಿನ್ಸ್ ಕೃತಿ ಕುರಿತು ಇನ್ಫೋಸಿಸ್ ನ ಭ. ಚೇತಕ್ ಮತ್ತು ಕೆವೋಸ್ ಡೋಟ್ ಡೆಸ್ಟ್ರಾಯ್ ಕುರಿತು ಯುವರಾಜ ಕಾಲೇಜಿನ ಉಪನ್ಯಾಸಕಿ ಎಚ್. ನಿವೇದಿತಾ ಮಾತನಾಡಿದರು. ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಾ.ಕೆ.ಎಸ್. ಶಾಂತರಾಮ್, ಲೇಖಕ ನಗರ್ಲೆ ಶಿವಕುಮಾರ್, ಕೃತಿಯ ಕರ್ತೃ ಡಾ.ಭ. ನಾಗರಾಜ್ ಮೊದಲಾದವರು ಇದ್ದರು.