ಕನ್ನಡಪ್ರಭ ವಾರ್ತೆ ಹಾಸನ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎತ್ತಿನಹೊಳೆ ಯೋಜನೆಯ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್ ಮಲ್ಲೇಶ್ ಎಚ್. ಬಿ ಅವರು ಮಾತನಾಡುತ್ತ '''''''' ಸರ್ ಎಮ್ ವಿಶ್ವೇಶ್ವರಯ್ಯ ನವರ ಜನ್ಮ ದಿನದ ಜ್ಞಾಪಕಾರ್ಥವಾಗಿ ಭಾರತದಾದ್ಯಂತ ರಾಷ್ಟೀಯ ಎಂಜಿನಿಯರ್ ದಿನವನ್ನು ಆಚರಿಸಲಾಗುತ್ತಿದೆ ಮತ್ತು ವಿಶ್ವೇಶ್ವರಯ್ಯನವರ ಪರಿಶ್ರಮದ ಫಲವಾಗಿ ಭಾರತದಲ್ಲಿ ಹಲವಾರು ಅಣೆಕಟ್ಟುಗಳು ನಿರ್ಮಾಣವಾಗಿದ್ದು, ಇದರಿಂದ ಕೃಷಿಗೆ ಹೆಚ್ಚು ಪ್ರಯೋಜನವಾಗಿದೆ. ಅವರು ಸ್ಥಾಪಿಸಿದ ವಿದ್ಯುತ್ ಸ್ಥಾವರಗಳಿಂದ ಇಂದು ನಾವು ವಿದ್ಯುತ್ ಪಡೆಯುತ್ತಿದ್ದೇವೆ'''''''' ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುತ್ತ, ಪಶ್ಚಿಮ ಘಟ್ಟದಿಂದ ಸಮುದ್ರ ಸೇರುವ ಇನ್ನೂರು ಟಿಎಂಸಿ ನೀರಿನಲ್ಲಿ ಕೇವಲ ಇಪ್ಪತ್ತು ಟಿಎಂಸಿ ನೀರನ್ನು ಮೋಟಾರುಗಳ ಮೂಲಕ ಮೇಲೆತ್ತಿ ನೀರಿನ ಅಭಾವ ಇರುವ ಏಳು ಜಿಲ್ಲೆಗಳಿಗೆ ಪೂರೈಸಲಾಗುವುದೆಂದು ತಿಳಿಸಿದರು. ಈ ಯೋಜನೆಯಿಂದ 352 ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಇದರಿಂದಾಗಿ ಜಲ ಮರುಪೂರಣ ಕೆಲಸ ನೆಡೆಯಲಿದೆ ಎಂದರು. ಈ ಯೋಜನೆಯ ಹದಿನಾಲ್ಕು ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲಾಗುವುದು ಎಂದರು.ಗೌರವ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ತಿರುಮಲೇಶ್ ಅವರು ಯೋಜನೆಯ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್ ವೇಣುಗೋಪಾಲ್ ರಾವ್ ಅವರು ಇಂತಹ ಯೋಜನೆಗಳಿಂದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ಪಡೆಯಬೇಕಿದೆ ಎಂದರು.