ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಂದಾಲ್ ಕಾರ್ಖಾನೆಯಲ್ಲಿ ಇತ್ತೀಚಗೆ ಬಿಸಿ ನೀರು ಹರಿಸುವ ಪೈಪ್‌ಗಳ ದುರಸ್ತಿಯಲ್ಲಿ ತೊಡಗಿದ್ದ ಮೂವರು ಯುವ ಎಂಜಿನಿಯರ್‌ಗಳು ಸಾವು ಪ್ರಕರಣವನ್ನು ತನಿಖೆಗೊಳಪಡಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೇ ವೇಳೆ ಮಾತನಾಡಿದ ಎಐಯುಟಿಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಇತ್ತೀಚೆಗೆ ಜಿಂದಾಲ್ ಸ್ಟೀಲ್ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಮೂವರು ಯುವ ಎಂಜಿನಿಯರ್‌ಗಳ ಸಾವಿಗೆ ಕೈಗಾರಿಕೆಯಲ್ಲಿನ ಸುರಕ್ಷತಾ ಅಧಿಕಾರಿಗಳೇ ಕಾರಣರಾಗಿದ್ದಾರೆ. ದುರಂತದಲ್ಲಿ ಮೃತಪಟ್ಟ ಎಂಜಿನಿಯರ್‌ಗಳ ಕುಟುಂಬಕ್ಕೆ ಇವರೇ ಆಧಾರವಾಗಿದ್ದರು. ಸಾವಿನಿಂದಾಗಿ ಕಾರ್ಮಿಕ ಕುಟುಂಬಗಳು ತೀವ್ರ ಆಘಾತಕ್ಕೀಡಾಗಿವೆ. ಜಿಂದಾಲ್ ಕಾರ್ಖಾನೆಯಲ್ಲಿ ಈ ರೀತಿಯ ಅವಘಡಗಳು ನಡೆಯುತ್ತಿರುವುದು ಇದೇ ಹೊಸದೇನಲ್ಲ. ಆಗಾಗ್ಗೆ ಕಾರ್ಮಿಕರ ದುರಂತ ಸಾವಿನ ಪ್ರಕರಣಗಳು ನಡೆಯುತ್ತಿದ್ದು, ಕೈಗಾರಿಕೆಯಲ್ಲಿ ಕೆಲಸ ಮಾಡುವವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಜಿಂದಾಲ್‌ನಲ್ಲಿ ಸಂಭವಿಸಿರುವ ಮೂವರು ಎಂಜಿನಿಯರ್‌ಗಳ ಸಾವಿನ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಎನ್. ಮಾತನಾಡಿ, ಜಿಂದಾಲ್ ಸಂಸ್ಥೆಯು ತನ್ನ ನೌಕರರು ಹಾಗೂ ಕಾರ್ಮಿಕರ ಸುರಕ್ಷತೆಯನ್ನು ಎಂದೂ ಗಂಭೀರವಾಗಿ ಪರಿಗಣಿಸಿಲ್ಲ. ಸುರಕ್ಷತೆಯನ್ನು ಖಾತ್ರಿಪಡಿಸಬೇಕಾದ ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ. ಜಿಂದಾಲ್‌ನಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಸುರಕ್ಷತೆಯ ಖಾತ್ರಿ ಒದಗಿಸಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಎ.ಶಾಂತಾ, ಶರ್ಮಾಸ್, ಮುಖಂಡರಾದ ಮುರಳಿಕೃಷ್ಣ, ಚೇತನ್, ಜಯರಾಂ, ಪ್ರವೀಣ್ ಮತ್ತಿತರರಿದ್ದರು.ಕಾರ್ಮಿಕರ ಸಚಿವರಿಗೆ ಬರೆದ ಮನವಿಪತ್ರವನ್ನು ಸಂಘಟನೆಯ ಮುಖಂಡರು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಮನವಿ ಸ್ವೀಕರಿಸಿದರು.