ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆಯ ಅಂಗಡಿ ಮುಂಗಟ್ಟುಗಳಲ್ಲಿ ನಾಮಫಲಕಗಳು ಆಂಗ್ಲ ಭಾಷೆಯಲ್ಲಿರುವುದು ವಿಷಾದನೀಯ ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಬೇಸರ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನಲ್ಲಿ ಹೋರಾಟ ನಡೆಸಿ ಕನ್ನಡ ನಾಮಫಲಕ ಕಿತ್ತು ಹಾಕಿದ್ದಾರೆ. ಘಟನೆಗೆ ಕುರಿತು ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಸರ್ಕಾರ ಬಂಧಿಸಿತ್ತು. ನಂತರದ ದಿನಗಳಲ್ಲಿ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಎಂದರು.
ನಾಡು, ನುಡಿಗಾಗಿ ಚಳವಳಿ ನಡೆಸುವ ಹೋರಾಟಗಾರರನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಹೋರಾಟಗಾರರ ಒತ್ತಾಯದ ಮೇರೆಗೆ ಫೆ.28ರ ವರೆಗೆ ಆಂಗ್ಲ ನಾಮಫಲಕಗಳನ್ನು ಬದಲಿಸುವಂತೆ ಆದೇಶ ನೀಡಿದೆ. ಅದು ಮಂಡ್ಯದಿಂದಲೇ ಪ್ರಾರಂಭವಾಗಬೇಕು. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕು. ಆದರೆ, ಜಿಲ್ಲೆಯ ಎಲ್ಲ ನಗರ ಪಟ್ಟಣ ಪ್ರದೇಶಗಳ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ಮೇಲೆ ಹೆಚ್ಚಾಗಿ ಆಂಗ್ಲ ಭಾಷಾ ಬರಹಗಳನ್ನೇ ಕಾಣುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಹೆಚ್ಚು ಮಾತನಾಡುವ ನಮ್ಮ ಜಿಲ್ಲೆಗೆ ಇದರಿಂದ ಅಪಮಾನವಾದಂತಾಗಿದೆ. ತಕ್ಷಣ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳ ಮೇಲಿನ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲೇ ಅಳವಡಿಸಬೇಕು. ಇಲ್ಲದಿದ್ದರೆ ತೀವ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕನ್ನಡ ನೆಲದಲ್ಲಿ ಕನ್ನಡಿಗರ ಆಸ್ತಿ, ಹಣ, ಪ್ರಕೃತಿ, ಸಂಪತ್ತು, ಮೂಲಭೂತ ಸೌಕರ್‍ಯಗಳು ಬೇಕು, ಆದರೆ, ಕನ್ನಡ ಬೇಡ ಎಂದರೆ ಕರ್ನಾಟಕ ಏಕೆ ಬೇಕು. ನಿಮ್ಮ ರಾಜ್ಯಗಳಿಗೆ ಹೋಗಿ ಎಂದು ಅನ್ಯರಾಜ್ಯಗಳ ವ್ಯಾಪಾರಸ್ಥರಿಗೆ ತಾಕೀತು ಮಾಡಿದರು.
ಅಂಗಡಿ ಮುಂಗಟ್ಟುಗಳವರು ಕನ್ನಡದ ನಾಮಫಲಕಗಳನ್ನು ಅಳವಡಿಸದಿದ್ದಲ್ಲಿ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಆಡಳಿತಾಕಾರಿಗಳನ್ನು ಒತ್ತಾಯಿಸಿದರು.ಕನ್ನಡದ ಅಸ್ಮಿತೆ ಕಾಪಾಡುವ ನಿಟ್ಟಿನಲ್ಲಿ ಕನ್ನಡದ ನೆಲದಲ್ಲಿ ಕನ್ನಡಿಗರೇ ಉದ್ಯೋಗ ನೀಡಬೇಕು. ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಬೇಕು. ಖಾಸಗಿ ಕಾನ್ವೆಂಟ್‌ಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ರೈಲ್ವೆ, ಬ್ಯಾಂಕ್ ಮತ್ತಿತರ ಕೇಂದ್ರ ಸರ್ಕಾರದ ಕಚೇರಿಗಳಲ್ಲೂ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ರಾಮು, ಥಾಮಸ್ ಬೆಂಜಮಿನ್, ಕೃಷ್ಣ ಇದ್ದರು.