ಗದಗ: ಶಿಕ್ಷಕರನ್ನು ತಯಾರು ಮಾಡುವ ಶಿಕ್ಷಣ ಮಹಾವಿದ್ಯಾಲಯಗಳ ಪ್ರಶಿಕ್ಷಣಾರ್ಥಿಗಳು ಸರ್ವಾಂಗೀಣ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಿದ್ದು, ಎನ್ನೆಸ್ಸೆಸ್ ಶಿಬಿರಗಳು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ. ದಳಪತಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು ಮಾತನಾಡಿ, ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರಲು ಸಾಧ್ಯ, ಆ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು 7 ದಿನಗಳ ಕಾಲ ಉತ್ತಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಮಲ್ಲಿಕಾರ್ಜುನ ನಾಯಕ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಕಾರ್ಯವು ಅವರ ಮುಂದಿನ ಪೀಳಿಗೆಗೆ ಅನುಕರಣೆಯ ಹಾಗೂ ಯಾವುದೇ ಪ್ರತಿಷ್ಠೆ ಬಯಸದೆ ನಿಜವಾದ ಸೇವೆ ಮಾಡೋಣ ಎಂದು ಹೇಳಿದರು.ಈ ವೇಳೆ ಎನ್ನೆಸ್ಸೆಸ್ ನೋಡಲ್ ಅಧಿಕಾರಿ ಡಾ. ವಿ.ಎಚ್. ಕೊಳ್ಳಿ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಡಾ. ಕಸ್ತೂರಿ ದಳವಾಯಿ ಸ್ವಾಗತಿಸಿದರು. ಕೀರ್ತಿ ಹಿರೇಮಠ ಹಾಗೂ ರೋಹಿಣಿ ಹಲಗಿತ್ತಿ ನಿರೂಪಿಸಿದರು. ಕಾರ್ಯಕ್ರಮಾಧಿಕಾರಿ ಎಂ.ಎಂ.ನದಾಫ ವಂದಿಸಿದರು.