ತನುಮನದಲ್ಲಿ ಕನ್ನಡ ಸಮೃದ್ಧಗೊಳಿಸಿ: ಟಿ.ಪಿ.ರಮೇಶ್

KannadaprabhaNewsNetwork |  
Published : Nov 25, 2026, 02:30 AM IST
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ಭವಿಷ್ಯದ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸಿ ಪ್ರತಿಯೊಬ್ಬರ ತನುಮನದಲ್ಲಿ ಕನ್ನಡ ಭಾಷೆ ಸಮೃದ್ಧಗೊಳಿಸಬೇಕಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಹೇಳಿದರು.

ಸೋಮವಾರಪೇಟೆ : ಭವಿಷ್ಯದ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸಿ ಪ್ರತಿಯೊಬ್ಬರ ತನುಮನದಲ್ಲಿ ಕನ್ನಡ ಭಾಷೆ ಸಮೃದ್ಧಗೊಳಿಸಬೇಕಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಹೇಳಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ತೋಳೂರು ಶೆಟ್ಟಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಮಂಗಳವಾರ ‘71ನೇ ಕನ್ನಡ ರಾಜ್ಯೋತ್ಸವ -2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಿ ಆನಂತರ ಇತರ ಭಾಷೆಗಳನ್ನು ಉದ್ಯೋಗ ಹಾಗೂ ವ್ಯವಹಾರಗಳಿಗೆ ಬಳಸಿಕೊಳ್ಳುವಂತೆ ಮನವಿ ಮಾಡಿಕೊಂಡರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಗಮ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ತನ್ನ ಅವಧಿಯಲ್ಲಿ ಸಾಹಿತ್ಯ ಪರವಾದ 40ಕ್ಕೂ ಹೆಚ್ಚು ದತ್ತಿ ಕಾರ್ಯಕ್ರಮಗಳು ನಡೆದಿವೆ. ಸೋಮವಾರಪೇಟೆ ತಾಲೂಕಿನಲ್ಲಿ 7 ದತ್ತಿ ಕಾರ್ಯಕ್ರಮಗಳು ಪ್ರಸ್ತುತ ಸಾಲಿನಲ್ಲಿ ನಡೆದಿದ್ದು ಇದೀಗ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಈ ಶಾಲೆಯಲ್ಲಿ ಆಯೋಜನೆಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಐಗೂರಿನಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಲಜಾಶೇಖರ್ ಮಾತನಾಡಿ, ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಎಂಬ ಗೀತೆಯಂತೆ ಕನ್ನಡಿಗರು ಕನ್ನಡಕ್ಕಾಗಿ ಒಗ್ಗಟಾಗಬೇಕು ಎಂದು ಕರೆ ನೀಡಿದರು.ಶಾಂತಳ್ಳಿ ಹೋಬಳಿ ಘಟಕದ ಅಧ್ಯಕ್ಷ ಸಿ.ಎಸ್.ನಾಗರಾಜು ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನಗಳನ್ನು ಬುದ್ದಿಶಕ್ತಿಗಳನ್ನು ವೃದ್ದಿಗೊಳಿಸಿದಲ್ಲಿ ತಾವೆಲ್ಲರೂ ಪ್ರಭುದ್ಧರಾಗಲು ಸಾಧ್ಯ ಎಂದರು.ರಾಜ್ಯ ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಶಾಂತಳ್ಳಿ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಕೆ.ಯು.ಜಗದೀಶ್ ಮತ್ತಿತರರು ಮಾತನಾಡಿದರು.ತೋಳೂರು ಶೆಟ್ಟಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷರು ಹಾಗೂ ಉದ್ಯಮಿಯೂ ಆದ ಬಿ.ಎಸ್.ಸುಂದರ್ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯತಿ ನಿವೃತ್ತ ನೌಕರ ದಾಮೋದರ್ ಗಟ್ಟಿ ಅವರನ್ನು ಗೌರವಿಸಲಾಯಿತು.ಎಸ್.ಎಸ್.ಎಲ್.ಸಿಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕ ಪಡೆದ ವಿವಿಧ ಶಾಲೆಗಳ ಒಟ್ಟು 31 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಗೌರವಿಸಲಾಯಿತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್, ಜಿಲ್ಲಾ ಸಮಿತಿಯ ಸದಸ್ಯ ಶ್ರೀಧರ್ ಹೂವಲ್ಲಿ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎ.ಪಿ.ವೀರರಾಜು, ಮಾಜಿ ಅಧ್ಯಕ್ಷ ಜೆ.ಸಿ.ಶೇಖರ್, ಕೀರ್ತಿ ಪ್ರಸಾದ್, ಮಾಯ ದಿನೇಶ್, ಶೀಲಾ ಡಿ ಸೋಜಾ, ವಸಂತಿ, ಶುಭಾ ಮತ್ತಿತರರಿದ್ದರು.ಕನ್ನಡ ಧ್ವಜವನ್ನು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ.ವಿಜೇತ್ ಆರೋಹಣ ಮಾಡಿ ಸ್ವಾಗತಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಬಳಕೆ ದುಷ್ಪರಿಣಾಮ ಎಚ್ಚರ ವಹಿಸಿ: ಮಾರುತಿ ಬಾಗಡೆ
ಕಾವೇರಿ ಸಂರಕ್ಷಣೆಗೆ ಯೋಜನೆ ರೂಪಿಸಿ: ರವಿಶಂಕರ್ ಗುರೂಜಿ