ದೇಶ ಸುತ್ತುವುದರಿಂದ ಜ್ಞಾನ ವೃದ್ಧಿ- ರಟ್ಟಿಹಳ್ಳಿ

KannadaprabhaNewsNetwork |  
Published : Jan 12, 2024, 01:46 AM IST
ಪೋಟೊ-ಪಟ್ಟಣ ಪಂಚಾಯತ ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ ಅವರು ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಕೋಶವನ್ನು ಓದಬೇಕು ಇಲ್ಲವೇ ದೇಶವನ್ನಾದರೂ ಸುತ್ತಿ ನೋಡಬೇಕು. ಇದರಿಂದ ಜ್ಞಾನ ಪ್ರಾಪ್ತಿ, ಜ್ಞಾನ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಪಟ್ಟಣ ಪಂಚಾಯತ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ ಮಕ್ಕಳಿಗೆ ಕರೆ ನೀಡಿದರು.

ವಿದ್ಯಾರ್ಥಿಗಳಿಗೆ ಕರ್ನಾಟಕ ಶೈಕ್ಷಣಿಕ ಪ್ರವಾಸ

ಶಿರಹಟ್ಟಿ: ಕೋಶವನ್ನು ಓದಬೇಕು ಇಲ್ಲವೇ ದೇಶವನ್ನಾದರೂ ಸುತ್ತಿ ನೋಡಬೇಕು. ಇದರಿಂದ ಜ್ಞಾನ ಪ್ರಾಪ್ತಿ, ಜ್ಞಾನ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಪಟ್ಟಣ ಪಂಚಾಯತ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ ಮಕ್ಕಳಿಗೆ ಕರೆ ನೀಡಿದರು.

ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿನ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಓಬಿಸಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಗುರುವಾರ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದರು.

ವೈಜ್ಞಾನಿಕವಾಗಿ ದೇವಾಲಯಗಳನ್ನು, ಶಿಲ್ಪ ಕಲೆಗಳನ್ನು ನಿರ್ಮಿಸಿದ್ದು, ಮಕ್ಕಳು ಹೊಸ ಪ್ರದೇಶಗಳನ್ನು ನೋಡಿ ಪಾಠದಲ್ಲಿ ಕಲಿತದ್ದನ್ನು ಅಧ್ಯಯನ ಮಾಡಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಲೆ ಕಲಿಯಲು ಬೇಕಾದ ಪೂರಕ ವಾತಾವರಣ, ಗುಣಮಟ್ಟದ ಶಿಕ್ಷಣ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿರುವ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿವೆ ಎಂದರು.

ಪುಸ್ತಕ ಓದುವ ಜೊತೆಗೆ ರಾಜ್ಯದ ಪ್ರೇಕ್ಷಣೀಯ, ಐತಿಹಾಸಿಕ, ಧಾರ್ಮಿಕ ಹಾಗೂ ನಮ್ಮ ಭಾಗದ ಭೌಗೋಳಿಕ ಹಿನ್ನೆಲೆ ತಿಳಿದುಕೊಳ್ಳುವ ದೃಷ್ಟಿಯಿಂದ ಮಕ್ಕಳಿಗಾಗಿ ಸರ್ಕಾರ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪರಿಣಾಮಕಾರಿ ಸ್ಥಳಗಳ ದರ್ಶನ ಮಾಡಿಕೊಂಡು ಶೈಕ್ಷಣಿಕ ಗುಣಮಟ್ಟ ಸುಧಾರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಮಾತನಾಡಿ, ಸರ್ಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಶಾಲೆಯ ನಾಲ್ಕು ಗೋಡೆಗಳ ನಡುವೆ ವಿದ್ಯಾರ್ಥಿಗಳ ಜೀವನ ಪರಿಪೂರ್ಣವಾಗಿ ರೂಪುಗೊಳ್ಳುವುದು ಅಸಾಧ್ಯ. ಸಾಹಿತ್ಯ, ಸಂಸ್ಕೃತಿ, ಕಲೆ, ಸಂಸ್ಕಾರ ಬಿಂಬಿಸುವ ಪ್ರೇಕ್ಷಣೀಯ ಐತಿಹಾಸಿಕ ತಾಣಗಳ ಪರಿಚಯ ಮಕ್ಕಳಿಗೆ ಆಗಬೇಕು ಎಂದರು.

ಅಲ್ಲಿನ ಜನಜೀವನ ಇತಿಹಾಸ ಆಚಾರ ವಿಚಾರಗಳ ಕುರಿತು ತಿಳುವಳಿಕೆ ಮೂಡಿಸಬೇಕು. ಈ ದಿಸೆಯಲ್ಲಿ ಪ್ರತಿಯೊಬ್ಬವಿದ್ಯಾರ್ಥಿಗಳಿಗೂ ಶೈಕ್ಷಣಿಕ ಪ್ರವಾಸ ಎಂಬುದು ಅತೀ ಮುಖ್ಯ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಇತಿಹಾಸ, ಸಂಸ್ಕೃತಿ ಅರಿತುಕೊಳ್ಳುವಲ್ಲಿ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ಯಶಸ್ವಿಯಾಗಬೇಕು. ಪ್ರವಾಸದ ನಂತರ ಪ್ರವಾಸದ ಅನುಭವವನ್ನು ಲೇಖನ ಮೂಲಕ ಬರೆಯಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರವಾಸದ ಸಮಯದಲ್ಲಿ ಅಸುರಕ್ಷಿತ ಆಹಾರ ಸೇವನೆ ಮಾಡಬಾರದು. ಮಿತವಾದ ಆಹಾರ ಸೇವನೆ ಒಳ್ಳೆಯದು. ನಿಯಮ ಮೀರಿ ಮಕ್ಕಳು ನಡೆದುಕೊಳ್ಳದೇ ಎಚ್ಚರಿಕೆಯಿಂದ ಪ್ರವಾಸ ಮಾಡಿ ಎಲ್ಲವನ್ನು ತಿಳಿದುಕೊಳ್ಳುವ ಜೊತೆಗೆ ವಿದ್ಯಾರ್ಥಿಗಳು ಕ್ರಿಯಾಶೀಲತೆ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಓದಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ತಾಲೂಕಿನ ೨೨ ಪ್ರೌಢ ಶಾಲೆ, ೨ ವಸತಿ ಶಾಲೆಗಳು ಸೇರಿದಂತೆ ಒಟ್ಟು ೬೪ ವಿದ್ಯಾರ್ಥಿಗಳು ನಾಲ್ಕು ದಿನಗಳ ಕಾಲ ಉಚಿತ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದು, ಗೋಕರ್ಣ, ಕೊಲ್ಲೂರ, ಶಿವಮೊಗ್ಗ, ಚಿತ್ರದುರ್ಗದ ಐತಿಹಾಸಿಕ, ಧಾರ್ಮಿಕ ಸ್ಥಳಗಳನ್ನು ನೋಡಲಿದ್ದಾರೆ ಎಂದು ತಿಳಿಸಿದರು.

ಪಟ್ಟಣ ಪಂಚಾಯತ ಸದಸ್ಯ ಹೊನ್ನಪ್ಪ ಶಿರಹಟ್ಟಿ, ಎನ್.ಆರ್. ಕುಲಕರ್ಣಿ, ಶರಣಬಸವ ಪಾಟೀಲ, ಎಂ.ಕೆ. ಲಮಾಣಿ, ಎಂ.ಎ. ಮಕಾನದಾರ, ಹರೀಶ ಎಸ್, ಎನ್.ಎನ್. ಸಾವಿರಕುರಿ ಸೇರಿ ಅನೇಕರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ