ಕನ್ನಡಪ್ರಭ ವಾರ್ತೆ ಹಾಸನ
ನಗರದ ಆರ್. ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ೨೦೨೫-೨೦೨೬ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್, ರೆಡ್‌ಕ್ರಾಸ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣವು ಕೇವಲ ಪುಸ್ತಕ ಜ್ಞಾನ ಅಥವಾ ಪರೀಕ್ಷೆಯ ಅಂಕಗಳಿಗೆ ಸೀಮಿತವಾಗಬಾರದು. ಅದು ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯಾಗಬೇಕು. ಶೈಕ್ಷಣಿಕ ದಿನಚರಿ ಅಸ್ತವ್ಯಸ್ತವಾಗಿದೆ. ಅದನ್ನು ಸರಿಪಡಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಂತೆಯೇ ಸಾಮಾನ್ಯ ವ್ಯವಸ್ಥೆಯನ್ನು ತೀರಾ ಕಡೆಗಣಿಸಲಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣ ಎಂಬ ಪದದ ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕು. ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೆ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಬೇಕು. ಕಿರಿಯರಿಂದ ವಯಸ್ಕರವರೆಗೆ ಅಭಿರುಚಿ ಹಾಳಾಗಿದೆ. ಸದನದಲ್ಲಿ ಐಪಿಎಲ್ ಟಿಕೆಟ್ ಬೇಡಿಕೆಯನ್ನು ಶಾಸಕರು ಇಟ್ಟುತ್ತಾರೆ ಎಂದರೆ ಅವರ ಅಭಿರುಚಿ ಏನಾಗಬೇಕಿತ್ತು ಎಂಬುದನ್ನು ಒಮ್ಮೆ ಆಲೋಚಿಸಬೇಕಿದೆ. ಬೂಕರ್ ಪ್ರಶಸ್ತಿ ತಂದ ಹೆಣ್ಣು ಮಗಳನ್ನು ಕರೆತರಲು ಹೋಗಬೇಕಾದ ಮಹನೀಯರು ಕ್ರಿಕೆಟ್ ತಂಡವನ್ನು ಆಹ್ವಾನಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಇವೆಲ್ಲವೂ ಒಳ್ಳೆಯ ಬೆಳವಣಿಗಳಲ್ಲ. ನಮ್ಮ ಅಭಿರುಚಿಗಳನ್ನು ತಿದ್ದಿಕೊಳ್ಳುವ ಕೆಲಸವಾಗಬೇಕಿದೆ ಎಂದು ತಿಳಿಸಿದರು. ಪ್ರಾಂಶುಪಾಲರಾದ ಡಿ.ಕೆ. ಮಂಜಯ್ಯ ಮಾತನಾಡಿ, ನಾವು ಜರೂರು ಮತ್ತು ಜಾಗೃತಿಯ ಕಾಲಘಟ್ಟದಲ್ಲಿದ್ದೇವೆ. ಹದಿಹರೆಯದ ವಯಸ್ಸಿನಲ್ಲಿ ಗುರುಹಿರಿಯರ ಮಾರ್ಗದರ್ಶನ ಪಡೆಯಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕಿದೆ. ಬಂದು ಹೋಗುವುದರ ನಡುವೆ ಸಂಬಂಧಗಳ ಬೆಸುಗೆ ಬಹಳ ಮುಖ್ಯವಾಗಿದೆ. ಯಾವುದೇ ವ್ಯವಸ್ಥೆಯಾಗಲಿ ನಿಷ್ಠೆ, ಪ್ರಾಮಾಣಿಕತೆ, ಪರಿಶುದ್ಧ ಮನಸ್ಥಿತಿ ಇರಬೇಕು. ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಮೋಹನ್ ಕುಮಾರ್ ಜಿ. ಆರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯ ಅನಾವರಣ ಮಾಡಲು ಸಾಂಸ್ಕೃತಿ ವೇದಿಕೆ ಸಹಾಯ ಮಾಡುತ್ತದೆ. ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ವೇದಿಕೆಯ ಪಾತ್ರ ಹಿರಿದಾಗಿದೆ. ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಎಲ್ಲಾ ಘಟಕಗಳು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. ಕಾಲೇಜಿನ ವಿವಿಧ ವಿಭಾಗಗಳಲ್ಲಿ ಪಿಎಚ್‌ಡಿ ಪದವಿ ಪಡೆದ ಉಪನ್ಯಾಸಕರನ್ನು ಮತ್ತು ಉದಯೋನ್ಮುಖ ನಟ ಮತ್ತು ಉಪನ್ಯಾಸಕರಾದ ಲೋಕೇಶ್ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ "ಭಿನ್ನ ಭೇದವ ಮಾಡಬೇಡಿರಿ " ಎಂಬ ತತ್ವ ಪದವನ್ನು ಹಾಡುವ ಮೂಲಕ ಎಚ್. ಎಲ್. ಮಲ್ಲೇಶ್ ಗೌಡ ಅವರು ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಚಾಲಕರಾದ ಹೇಮಾವತಿ ಎಂ.ವಿ, ರೆಡ್‌ಕ್ರಾಸ್ ಸಂಚಾಲಕರಾದ ಡಾ. ಶಿವಕುಮಾರ್ ಸಿ.ಎಲ್., ಕ್ರೀಡಾ ವಿಭಾಗದ ಸಂಚಾಲಕರಾದ ಡಾ. ಸುರೇಶ್ ಕುಮಾರ್ ಕೆ.ಆರ್, ಎನ್‌ಎಸ್‌ಎಸ್ ಘಟಕದ ಸಂಚಾಲಕರಾದ ಸುರೇಶ್ ಕುಮಾರ್ ಎಚ್. ಎಂ, ರೆಡ್ ರಿಬ್ಬನ್ ಕ್ಲಬ್ ಸಂಚಾಲಕರಾದ ನಂದನ್ ಪಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲರನ್ನು ಹಿಂದಿ ವಿಭಾಗದ ಮುಖ್ಯಸ್ಥರಾದ ಇಂದಿರಾಮಣಿ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಕಾಂತರಾಜು ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಲೋಕೇಶ್ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಿತ ಪ್ರಾರ್ಥನೆ ಮಾಡಿದರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.