ಬೇಸಿಗೆ ಬೆಳೆಗೆ 120 ದಿನ ಸತತ ನೀರು ಹರಿಸಿ: ಮಾಜಿ ಸಚಿವ ಎಸ್.ಎ.ರವೀಂದ್ರನಾಥ

KannadaprabhaNewsNetwork |  
Published : Nov 21, 2026, 01:30 AM IST
20ಕೆಡಿವಿಜಿ9, 10-ದಾವಣಗೆರೆ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ನಡೆದ ಭದ್ರಾ ಅಚ್ಚುಕಟ್ಟು ರೈತರು, ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಇತರರು ಇದ್ದರು. | Kannada Prabha

ಸಾರಾಂಶ

ಭದ್ರಾ ಡ್ಯಾಂನಿಂದ ಭತ್ತ ಮತ್ತು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಬೇಸಿಗೆ ಹಂಗಾಮಿಗಾಗಿ ಜನವರಿ ಮೊದಲ ವಾರದಿಂದಲೇ ಸತತವಾಗಿ 120 ದಿನಗಳ ಕಾಲ ನೀರುಹರಿಸುವ ಬಗ್ಗೆ ತಕ್ಷಣವೇ ಐಸಿಸಿ ಸಭೆ ಕರೆದು, ನಿರ್ಣಯ ಕೈಗೊಳ್ಳುವಂತೆ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ಇತರೆ ರೈತ ಮುಖಂಡರ ನೇತೃತ್ವದ ಸಭೆಯಲ್ಲಿ ಸರ್ಕಾರಕ್ಕೆ ತಾಕೀತು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಭತ್ತ ಮತ್ತು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಬೇಸಿಗೆ ಹಂಗಾಮಿಗಾಗಿ ಜನವರಿ ಮೊದಲ ವಾರದಿಂದಲೇ ಸತತವಾಗಿ 120 ದಿನಗಳ ಕಾಲ ನೀರುಹರಿಸುವ ಬಗ್ಗೆ ತಕ್ಷಣವೇ ಐಸಿಸಿ ಸಭೆ ಕರೆದು, ನಿರ್ಣಯ ಕೈಗೊಳ್ಳುವಂತೆ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ಇತರೆ ರೈತ ಮುಖಂಡರ ನೇತೃತ್ವದ ಸಭೆಯಲ್ಲಿ ಸರ್ಕಾರಕ್ಕೆ ತಾಕೀತು ಮಾಡಲಾಯಿತು.

ನಗರದ ಜಿಪಂ ಮುಂಭಾಗದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ಇತರೆ ರೈತ ಮುಖಂಡರ ನೇತೃತ್ವದಲ್ಲಿ ನಡೆದ ಅಚ್ಚುಕಟ್ಟು ರೈತರ ಸಭೆಯಲ್ಲಿ, ಭದ್ರಾ ಡ್ಯಾಂನ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟಗಳು, ಮುಂಬರುವ ಬೇಸಿಗೆ ಹಂಗಾಮಿನ ಭತ್ತದ ಬೆಳೆಗೆ ಹಾಗೂ ಅಡಿಕೆ ತೋಟಗಳಿಗೆ ನೀರಿನ ಅಗತ್ಯತೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ, ಐಸಿಸಿ ಸಭೆ ಕರೆದು, ಜನವರಿ ಮೊದಲ ವಾರದಿಂದಲೇ ನೀರು ಹರಿಸುವಂತೆ ಒತ್ತಾಯಿಸಲಾಯಿತು.

ಭಾರತೀಯ ರೈತ ಒಕ್ಕೂಟದ ಧುರೀಣ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾತನಾಡಿ, ಭದ್ರಾ ಡ್ಯಾಂನಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ದಿನಾಂಕ ಮುಂಚೆಯೇ ಐಸಿಸಿ ಸಭೆ ಮಾಡಿ, ಘೋಷಿಸಬೇಕು. ಭತ್ತದ ಸಸಿ ಮಡಿ ಮಾಡಿಕೊಳ್ಳಲಿಕ್ಕೆ 25 ದಿನ ಬೇಕು. ನೀರಿನ ವೇಳಾಪಟ್ಟಿ ಘೋಷಿಸದಿದ್ದರೆ ಹೊಲ ಹದಗೊಳಿಸಲು, ಯಾವ ಬೆಳೆ ಹಾಕಬೇಕು, ಬೀಜ ಸಿದ್ಧತೆಗೆಲ್ಲಾ ಹೇಗೆ ಸಾಧ್ಯವಾಗುತ್ತದೆ?, ಬೇಗನೇ ಐಸಿಸಿ ಸಭೆ ಕರೆದು ನಿರ್ಧರಿಸಿದರೆ ಬೆಳಗಿನ ನೀರೋ ಅಥವಾ ರಾತ್ರಿ ನೀರೋ ಎಂಬ ಬಗ್ಗೆ ರೈತರಿಗೆ ಸ್ಪಷ್ಟತೆಯಾದರೂ ಸಿಗುತ್ತದೆ ಎಂದರು.

ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಿನ್ನೆ ಸಭೆ ನಡೆದಿದ್ದರೂ, ಐಸಿಸಿ ಸಭೆ ದಿನಾಂಕದ ಬಗ್ಗೆ ಗೊಂದಲ ಇದ್ದೇ ಇದೆ. ಐಸಿಸಿ ಅಧ್ಯಕ್ಷರಾದ ಶಿವಮೊಗ್ಗ ಉಸ್ತುವಾರಿ ಸಚಿವರೇ ಸಭೆ ದಿನಾಂಕ ನಿಗದಿಪಡಿಸಬೇಕೆಂದು ನೀರಾವರಿ ಸಚಿವರು ಹೇಳಿದ್ದಾರೆ. ಐಸಿಸಿ ಸಭೆ ಬಗ್ಗೆ ಇನ್ನೂ ದಿನಾಂಕ ಅಂತಿಮವಾಗಿಲ್ಲ. ಭದ್ರಾ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಾಗ ಮುಂದಿನ 90ರಿಂದ 100 ದಿನದ ಕಾಲ ಬೆಳೆ ಉಳಿಸಿಕೊಳ್ಳುವುದು ಹೇಗೆಂಬ ಆತಂಕ ರೈತರಿಗೆ ಕಾಡುತ್ತಿದೆ. ಹಿಂದಿನ ಸಭೆಯಲ್ಲೇ ಯಾವುದೇ ಚರ್ಚೆ ಸರಿಯಾಗಿ ನಡೆದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್.ಲಿಂಗರಾಜ ಮಾತನಾಡಿ, ವಾಟರ್ ಎಮರ್ಜೆನ್ಸಿ ಘೋಷಣೆ ಬಳಿಕಲೂ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಮೇಲ್ದಂಡೆ, ಭದ್ರಾವತಿ ಹೀಗೆ ನೀರು ಹರಿಸಲಾಗುತ್ತಿದೆ. ಈ ಸ್ಥಿತಿಯಲ್ಲಿ ಐಸಿಸಿ ಸಭೆ ಕಡ್ಡಾಯವಾಗಿದ್ದು, ಏಕಪಕ್ಷೀಯವಾಗಿ ಅಥವಾ ಪ್ರಾಯೋಗಿಕ ಹೆಸರಿನಲ್ಲಿ ನೀರು ಬಿಡುವುದೇ ಕಾನೂನು ಬಾಹಿರ. ತುಂಗಾದಿಂದ 17.90 ಟಿಎಂಸಿ ನೀರು ಲಿಫ್ಟ್ ಮಾಡುವ ಮೂಲಕ ಸರ್ಕಾರ ಬದ್ಧತೆ ತೋರಲಿ. ನಮ್ಮ ಭಾಗದ ರೈತರ ಗಮನ ಬೇರೆಡೆಗೆ ಸೆಳೆದು, ಗೊಂದಲ ಉಂಟು ಮಾಡುವ ಕೆಲಸವು ಸರ್ಕಾರಕ್ಕೆ ಶೋಭೆ ತರದು ಎಂದು ಕಿಡಿಕಾರಿದರು.

ಜನ ಪ್ರತಿನಿಧಿಗಳಂತೂ ರೈತರನ್ನು ಗುಂಪು ಗುಂಪುಗಳನ್ನಾಗಿ ವಿಭಜಿಸಿ, ಮಾತನಾಡೋಣ ಎನ್ನುವ ಮೂಲಕ ತಮ್ಮ ಜವಾಬ್ಧಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಚ್ಚುಕಟ್ಟು ರೈತರಿಗೆ ಮಳೆಗಾಲದ ಬೆಳೆಗೆ ನೀರು ಕೊಡಲಿಲ್ಲ. ಆ ಬೆಳೆ ನಷ್ಟಕ್ಕೆ ಯಾರು ಹೊಣೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಲಿ. ಭದ್ರಾ ಡ್ಯಾಂ ನೀರಿನ ಮಟ್ಟ 175 ಅಡಿ ದಾಟಿದಾಗ ನಿಯಮದಂತೆ ನೀರು ಬಿಡಲಿ. ಅದನ್ನು ಬಿಟ್ಟು, ಬರ ಆವರಿಸಿದ್ದಾಗಲೇ ನೀರು ಬಿಡುವುದು ಸರಿಯಲ್ಲ. ಆಗಸ್ಟ್‌ನಲ್ಲಿ ಮಳೆಗಾಲದ ಬೆಳೆಗೆ ನೀರು ಕೇಳಿದರೂ ಬೇಸಿಗೆ ಬೆಳೆಯ ಮಾತು ಬಂದ ಕಾರಣಕ್ಕೆ ಅಚ್ಚುಕಟ್ಟು ರೈತರಿಗೆ ಮಳೆಗಾಲದ ಬೆಳೆಯೂ ಕೈತಪ್ಪಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚನ್ನಗಿರಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಮಾತನಾಡಿ, ಮೂರೂವರೆ ವರ್ಷದಿಂದ ನಾವು ಹೋರಾಡುತ್ತಾ ಬಂದಿದ್ದೇವೆ. ಇದ್ಯಾವುದೂ ವೈಯಕ್ತಿಕ ಲಾಭಕ್ಕಾಗಿ ಅಲ್ಲ. ರೈತರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟ. ಯಾರೂ ಸಹ ರೈತರಲ್ಲಿ ಒಡಕು ಮೂಡಿಸುವ, ರೈತರನ್ನು ವಿಭಜಿಸುವ ಪ್ರಯತ್ನ ಮಾಡಬೇಡಿ. ಸರ್ಕಾರದ ಪ್ರತಿನಿಧಿಗಳು, ಜನ ಪ್ರತಿನಿಧಿಗಳು ಕುಳಿತು, ರೈತ ಪರ ಸಮಗ್ರ ಚಿಂತನೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರೈತರ ಪರ ನಿರ್ಧಾರಗಳೇ ಶಾಶ್ವತವಾಗಿರುತ್ತವೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೀಗೆಯೇ ಮುಂದುವರಿದರೆ ಇಡೀ ಜಿಲ್ಲೆಯ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜನಜೀವನವೂ ಅಸ್ತವ್ಯಸ್ತಗೊಳ್ಳುವುದು ತಪ್ಪುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ರೈತ ಮುಖಂಡರಾದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಎಸ್.ಜಗದೀಶ, ಕುಂದುವಾಡ ಎಚ್.ಜಿ.ಗಣೇಶಪ್ಪ, ರಾಜು ವೀರಣ್ಣ, ಪಂಜು ಪೈಲ್ವಾನ ಇತರರು ಇದ್ದರು.

ಜನವರಿ 1ರಿಂದಲೇ ಭದ್ರಾ ನಾಲೆಗೆ ನೀರು ಹರಿಸಿ: ರೇಣು

ದಾವಣಗೆರೆ: ಭದ್ರಾ ಡ್ಯಾಂನಿಂದ ಬೇಸಿಗೆ ಬೆಳೆಗೆಂದು ಜ.1ರಿಂದಲೇ ಆರಂಭವಾಗುವಂತೆ ಸತತವಾಗಿ 120 ದಿನಗಳ ಕಾಲ ನೀರು ಹರಿಸುವಂತೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದ ಜಿಪಂ ಮುಂಭಾಗದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಭದ್ರಾ ಅಚ್ಚುಕಟ್ಟು ರೈತರು, ಮುಖಂಡರ ಸಭೆಯಲ್ಲಿ ಮಾತನಾಡಿ, 120 ದಿನಗಳ ಕಾಲ ನೀರು ಹರಿಸುವ ಬಗ್ಗೆ, ಜನವರಿ 1ರಿಂದಲೇ ನಾಲೆಗೆ ನೀರು ಹರಿಸುವ ಬಗ್ಗೆ ಐಸಿಸಿ ಸಭೆ ಕರೆದು, ನೀರಿನ ವೇಳಾಪಟ್ಟಿ ಪ್ರಕಟಿಸಬೇಕು ಎಂದರು.

ಐಸಿಸಿ ಸಭೆ ಹಾಗೂ ಆ ಸಭೆಯ ನಿರ್ಧಾರವನ್ನು ನೋಡಿಕೊಂಡು ಅಚ್ಚುಕಟ್ಟು ರೈತರ ಮುಂದಿನ ಸ್ವರೂಪದ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರೈತರಲ್ಲಿ ಅಡಿಕೆ ಬೆಳೆಗಾರರು, ಭತ್ತದ ಬೆಳೆಗಾರರೆಂಬ ಭೇದಭಾವವನ್ನು ಯಾರೂ ಸಹ ಮಾಡಬಾರದು ಎಂದು ಹೇಳಿದರು.

ಭದ್ರಾ ಡ್ಯಾಂ ಬೇಕಿದ್ದರೆ ಕರ್ನಾಟಕ ನೀರಾವರಿ ನಿಗಮದಲ್ಲೇ ಇರಲಿ. ಅದನ್ನು ಅಲ್ಲಿಂದ ಪ್ರತ್ಯೇಕಿಸಿ, ವಿಜೆಎನ್‌ಎಲ್‌ಗೆ ನೀಡುವುದು ಬೇಡ. ಅಲ್ಲದೇ, ಅಪ್ಪರ್ ಭದ್ರಾ ಯೋಜನೆಗೆ ನೀರು ಕೊಡುವುದಾದರೆ ಮೊದಲು ತುಂಗಾದಿಂದ ಮುತ್ತಿನಕೊಪ್ಪ ಏತ ನೀರಾವರಿ ಯೋಜನೆ ಕಾಮಗಾರಿಗೆ 30 ಕೋಟಿ ಹಣ ಕೊಟ್ಟು, ಕಾಮಗಾರಿ ಪೂರ್ಣಗೊಳಿಸಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಅಲ್ಲದೇ, ಭದ್ರಾ ಡ್ಯಾಂನ್ನು ಆಧುನೀಕರಣಗೊಳಿಸಿ, 29 ಟಿಎಂಸಿ ನೀರನ್ನು ಉಳಿಸಿಕೊಳ್ಳಬೇಕು. ಭದ್ರಾ ಡ್ಯಾಂ ವ್ಯಾಪ್ತಿಯಲ್ಲಿ ಶೇ.65ರಷ್ಟು ಅಚ್ಚುಕಟ್ಟು ಪ್ರದೇಶದ ದಾವಣಗೆರೆ ಜಿಲ್ಲೆಯಲ್ಲಿದೆ. ನಮ್ಮ ರೈತರಿಗೆ ಸಾಕಷ್ಟು ನೀರು ಸಿಗಬೇಕು. ನಂತರ ಬೇರೆಯವರಿಗೆ ನೀಡಬೇಕು. ಈಗಾಗಲೇ 4 ಟಿಎಂಸಿ ನೀರನ್ನು ವ್ಯರ್ಥವಾಗಿ ಹರಿದು ಹೋಗುವಂತೆ ಮಾಡಿದ್ದೀರಿ. ಮೊನ್ನೆ ಭದ್ರಾವತಿ ಭಾಗಕ್ಕೆ ಅರ್ಧ ಟಿಎಂಸಿ ನೀರು ಹೋಗಿರುವುದು ನಮ್ಮ ಜಿಲ್ಲೆಯ ರೈತರಿಗೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ